ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಆರೋಪ ಪ್ರಕರಣದ ತನಿಖೆ ಬಿರುಸಿನಿಂದ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಏಕೆಂದರೆ, ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಬೇಕಾಗಿದೆ.
ಸದ್ಯ ನಟಿ ರಾಗಿಣಿ ಆಪ್ತ ರವಿಶಂಕರ್ ಮತ್ತು ಅಶ್ವಿನ್ ಬೂಗಿ ವಿಚಾರಣೆ ನಡೆಸಿದ ಸಿಸಿಬಿ, ಬೆನ್ನಲ್ಲೇ ವಿರೇನ್ ಖನ್ನಾನಿಂದ ಮಾಹಿತಿ ಪಡೆಯಲು ಮುಂದಾಗಿದೆ. ಆದರೆ ಆತ ಬಂಧನವಾದ ದಿನದಿಂದ ಯಾವುದೇ ಮಾಹಿತಿ ಹೊರಹಾಕದ ಕಾರಣ ವಿರೇನ್ ಖನ್ನಾಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಇನ್ನೆರಡು ದಿನದಲ್ಲಿ ವಿರೇನ್ ಖನ್ನಾನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಪಡೆದು ಅಹಮದಾಬಾದ್ನ ಎಫ್ಎಸ್ಎಲ್ನಲ್ಲಿ ಪಾಲಿಗ್ರಾಫ್ ಪರೀಕ್ಷೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಪರೀಕ್ಷೆಗೆ ಒಳಪಡಿಸುವ ಮೊದಲು ವಿರೇನ್ ಖನ್ನಾ ಒಪ್ಪಿಗೆ ಅಗತ್ಯ. ಹೀಗಾಗಿ ಆತನನ್ನ ಒಪ್ಪಿಸಲು ಎಲ್ಲಾ ಪ್ರಯತ್ನ ನಡೆಸುತ್ತಿದ್ದಾರೆ. ಬೆಂಗಳೂರಿನ ಮಡಿವಾಳ ಎಫ್ಎಸ್ಎಲ್ನಲ್ಲಿ ಪಾಲಿಗ್ರಾಫ್ ಪರೀಕ್ಷೆ ವಿಭಾಗವಿದೆ. ಆದರೆ ತಾಂತ್ರಿಕ ಸಮಸ್ಯೆಯಾದ ಕಾರಣ ಅಹಮದಾಬಾದ್ನಲ್ಲಿ ಖನ್ನಾ ಒಪ್ಪಿಗೆ ಪಡೆದು ಪರೀಕ್ಷೆ ನಡೆಸಲಿದ್ದಾರೆ.
ಪಾಲಿಗ್ರಾಫ್ ಪರೀಕ್ಷೆ ಹಿನ್ನೆಲೆ:
ತನಿಖೆ ವೇಳೆ ಆರೋಪಿ ಕೊಡುವ ಹೇಳಿಕೆಗಳು ಅಸ್ಪಷ್ಟ ಮತ್ತು ಸುಳ್ಳಾಗಿದ್ದಾಗ ಈ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಗುತ್ತದೆ. ಆದರೆ ಈ ವೇಳೆ ಪರೀಕ್ಷೆ ನಡೆಸಲು ನ್ಯಾಯಾಲಯದ ಅನುಮತಿ ಕೇಳಬೇಕು. ನಂತರ ಆರೋಪಿಯ ಅನುಮತಿ ಪಡೆದು ಆರೋಪಿಯ ದೇಹದ ಐದು ಭಾಗದಲ್ಲಿ ವೈರ್ ಮಾದರಿಯ ವಸ್ತುವನ್ನ ಅಳವಡಿಸಲಾಗುತ್ತದೆ. ಮನ:ಶಾಸ್ತ್ರಜ್ಞರೇ ಇದರ ನಿರ್ವಹಣೆ ಮಾಡಲಿದ್ದಾರೆ. ದೇಹದ ಐದು ಭಾಗದಲ್ಲಿ ವೈರ್ ಅಳವಡಿಸಿದ ಬಳಿಕ ತನಿಖಾಧಿಕಾರಿಗಳು ಪ್ರಶ್ನೆಗಳನ್ನ ಕೇಳಲು ಪ್ರಾರಂಭಿಸ್ತಾರೆ. ಒಂದಷ್ಟು ಕ್ಲಿಷ್ಟಕರವಾದ ಪ್ರಶ್ನೆಗಳನ್ನ ಕೇಳಲಿದ್ದು, ಆಗ ಆರೋಪಿ ಸುಳ್ಳು ಮಾಹಿತಿ ಉತ್ತರಿಸುವಾಗ ದೇಹದಲ್ಲಿ ವ್ಯತ್ಯಯ ಕಂಡು ಬರುತ್ತದೆ. ಈ ಮೂಲಕ ಆರೋಪಿಯ ಉತ್ತರ ಎಷ್ಟರ ಮಟ್ಟಿಗೆ ಸತ್ಯ- ಸುಳ್ಳು ಎಂಬುದು ಪತ್ತೆಯಾಗುತ್ತದೆ.