ಬೆಂಗಳೂರು: ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಲೋನ್ ಕೊಡಿಸುವ ಸೋಗಿನಲ್ಲಿ ಕೊಟ್ಯಂತರ ರೂ. ಪಡೆದು ವಂಚಿಸುತ್ತಿದ್ದ ಅಂತಾರಾಜ್ಯ ವಂಚಕನನ್ನು ಸಿಸಿಬಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ.
ತಮಿಳುನಾಡು ತಿರುನಲ್ ವೇಲಿ ಮೂಲದ ಹರಿ ನಾಡರ್ ಆಲಿಯಾಸ್ ಗೋಪಾಲಕೃಷ್ಣ ನಾಡರ್ ಬಂಧಿತ ಆರೋಪಿ. ಈತನಿಂದ ಎರಡು ಕೋಟಿ ಮೌಲ್ಯದ 3.893 ಕೆಜಿ ಚಿನ್ನಾಭರಣ, 8.76 ಲಕ್ಷ ರೂ. ನಗದು ಹಾಗೂ ಒಂದು ಕಾರನ್ನು ವಶಕ್ಕೆ ಪಡೆದಿದ್ದಾರೆ.
ಇದಕ್ಕೂ ಮುನ್ನ ಪ್ರಕರಣದ ಎರಡನೇ ಆರೋಪಿ ಕೇರಳದ ರಂಜಿತ್ ಎಸ್.ಪಣಿಕ್ಕರ್ ಅನ್ನು ಏ.4ರಂದು ಬಂಧಿಸಿ 10 ಲಕ್ಷ ಬೆಳೆಬಾಳುವ 140 ಗ್ರಾಂ ಚಿನ್ನ ಹಾಗೂ ವಜ್ರಾಭರಣ, ಒಂದು ಕಾರು ಹಾಗೂ 96 ಸಾವಿರ ರೂ.ಹಣ, ಆರೋಪಿ ಬ್ಯಾಂಕ್ ಖಾತೆಯಲ್ಲಿದ್ದ 38. 85 ಲಕ್ಷ ರೂ.ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದರು.
ಹರಿನಾಡರ್, ರಂಜಿತ್ ಹಾಗೂ ಸಹಚರರು ವ್ಯವಸ್ಥಿತ ಸಂಚು ರೂಪಿಸಿಕೊಂಡು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ಗುಜರಾತ್ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಲೋನ್ ಕೊಡಿಸುವುದಾಗಿ ವಂಚಿಸುತ್ತಿದ್ದರು. ಬೆಂಗಳೂರಿನ ಉದ್ಯಮಿ ವೆಂಕಟರಮಣಿ ಶಾಸ್ತ್ರಿ ಅವರನ್ನು ಸಂಪರ್ಕಿಸಿದ ವಂಚಕರ ಗ್ಯಾಂಗ್ ಶೇ. 6 ಬಡ್ಡಿದರದಲ್ಲಿ 360 ಕೋಟಿ ರೂ. ಸಾಲ ಕೊಡಿಸುವುದಾಗಿ ಭರವಸೆ ನೀಡಿದ್ದರು. ದೀರ್ಘಕಾಲದ ಮಾತುಕತೆ ನಂತರ ಕೇರಳದ ಪಂಚತಾರ ಹೋಟೆಲ್ವೊಂದಕ್ಕೆ ಕರೆಯಿಸಿಕೊಂಡು ಸಾಲ ಕೊಡಿಸುವುದಾಗಿ ಪುಸಲಾಯಿಸಿದ್ದರು.
ಇದರಂತೆ ಒಪ್ಪಿಕೊಂಡ ಉದ್ಯಮಿಗೆ ಕೆಲ ದಿನಗಳ ಬಳಿಕ 360 ಕೋಟಿ ರೂ. ಬೆಲೆಯ ನಕಲಿ ಡಿಮ್ಯಾಂಡ್ ಡ್ರಾಪ್ಟ್ (ಡಿಡಿ) ತೋರಿಸಿ ಲೋನ್ ಮಂಜೂರಾಗಿದೆ ಎಂದು ನಂಬಿಸಿದ್ದಾರೆ. ಬಳಿಕ ಲೋನ್ ಸರ್ವಿಸ್ ಚಾರ್ಜ್ ಮೊತ್ತದ ಶೇ. 2 ರಷ್ಟು ಅಂದರೆ 7.20 ಕೋಟಿ ರೂ. ಹಣ ಪಡೆದಿದ್ದಾರೆ. ಹಣ ನೀಡಿ ಕೆಲ ದಿನಗಳ ಬಳಿಕ ಲೋನ್ ಕೊಡಿಸದೆ ಅಸಲು ಹಣ ನೀಡದೆ ಯಾಮಾರಿಸಿದ್ದಾರೆ. ಹಣ ಕೇಳಿದರೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿಧಾನಸೌಧ ಪೊಲೀಸ್ ಠಾಣೆಗೆ ಉದ್ಯಮಿ ವೆಂಕಟರಮಣ ದೂರು ನೀಡಿದ್ದರು.
ಪ್ರಕರಣ ಸಿಸಿಬಿಗೆ ಹಸ್ತಾಂತರಿಸಿದ ಹಿನ್ನೆಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಪತ್ತೆಯಾಗಿರುವ ಇತರೆ ಆರೋಪಿಗಳ ಶೋಧ ಮುಂದುವರೆಸಿದ್ದು, ಇವರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಖಾತೆಗಳಿಂದ ಹಣ ವರ್ಗಾವಣೆಯಾಗಿರುವ ಬಗ್ಗೆ ಸಿಸಿಬಿ ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ: ತಮಿಳುನಾಡು ಚುನಾವಣೆಯಲ್ಲಿ ಸೋತ 'ಬಂಗಾರದ ಮನುಷ್ಯ'... ಬಿದ್ದ ಮತಗಳೆಷ್ಟು?
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ: ಹರಿ ನಾಡರ್ ತಮಿಳುನಾಡಿನ ವಿಧಾನಸಭೆಯಲ್ಲಿ ತಿರುನೆಲ್ವೇಲಿ ಜಿಲ್ಲೆಯ ಆಲಂಗುಲಂ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ 37 ಸಾವಿರದ 603 ಮತ ಪಡೆದು ಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಎಐಎಡಿಎಂಕೆ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಮೈಮೇಲೆ ಹತ್ತಾರು ಕೆಜಿ ಚಿನ್ನಾಭರಣ ತೊಟ್ಟು ನಾಮಪತ್ರ ಸಲ್ಲಿಕೆ ಮಾಡಿದ್ದ ಹರಿ ನಾಡರ್ ಈ ಹಿಂದೆ ಕೂಡ ಅನೇಕ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿದ್ದರು.