ಬೆಂಗಳೂರು: ಅತ್ಯಾಚಾರ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸಿ, ದೇಶದಿಂದ ತಲೆಮರೆಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ಬಿಡದಿ ನಿತ್ಯಾನಂದ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಟರ್ ಪೋಲ್ ಕರ್ನಾಟಕ ಪೊಲೀಸರಿಂದ ಸ್ಪಷ್ಟನೆ ಕೇಳಿದೆ. ನಿತ್ಯಾನಂದ ವಿರುದ್ಧ ಅತ್ಯಾಚಾರ, ವಂಚನೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪವಿದ್ದು ಕರ್ನಾಟಕ, ತಮಿಳುನಾಡು ಹಾಗೂ ಗುಜರಾತ್‌ಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇವರ ವಿರುದ್ಧ ಕರ್ನಾಟಕ ಹಾಗೂ ಗುಜರಾತ್ ಪೊಲೀಸರು ರೆಡ್ ಕಾರ್ನರ್ ಹಾಗೂ ಬ್ಲೂ ಕಾರ್ನರ್ ನೊಟೀಸ್ ನೀಡುವಂತೆ ಇಂಟರ್ ಪೋಲ್ಗೆ ಪತ್ರ ಬರೆದು ಮನವಿ ಮಾಡಿದ್ದರು. ಇದರಂತೆ ಕರ್ನಾಟಕ ಪೊಲೀಸರಿಗೆ ಪತ್ರ ಬರೆದು ಸ್ಪಷ್ಟನೆ ಕೇಳಿತ್ತು.
ತನಿಖೆ ನಡೆಸುತ್ತಿರುವ ಸಿಐಡಿಯು ಇಂಟರ್ ಪೋಲ್ ಕೇಳಿದ ಪ್ರಶ್ನೆಗಳಿಗೆ ಸಮಗ್ರವಾಗಿ ಉತ್ತರಿಸಿದೆ. ನಿತ್ಯಾನಂದ ವಿರುದ್ಧ ದಾಖಲಾಗಿರುವ ಪ್ರಕರಣ, ಅಪರಾಧದ ಸ್ವರೂಪ, ಇರುವ ಕಾನೂನಾತ್ಮಕ ಪ್ರಕ್ರಿಯೆಗಳ ಬಗ್ಗೆ ಇಂಟರ್ ಪೋಲ್ ಮಾಹಿತಿ ಕೇಳಿದೆ ಎನ್ನಲಾಗಿದ್ದು, ಇದಕ್ಕೆ ಪ್ರತಿಯಾಗಿ ಸಿಐಡಿ ವಿವರಣೆ ಒದಗಿಸಿದೆ. 2019ರಲ್ಲಿ ನಟಿ ಮೇಲೆ ಅತ್ಯಾಚಾರವೆಸಗಿದ ಆರೋಪ ಹಿನ್ನೆಲೆಯಲ್ಲಿ ನಿತ್ಯಾನಂದ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದರು. 2022ರಲ್ಲಿ ಗುಜರಾತಿನ ಆಶ್ರಮವೊಂದರಲ್ಲಿ ನಾಲ್ಕು ಮಕ್ಕಳನ್ನು ಅಪಹರಿಸಿದ ಆರೋಪದಡಿ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಂಧನ ಭೀತಿಯಿಂದ ದೇಶದಿಂದಲೇ ತಲೆಮರೆಸಿಕೊಂಡು ಈಕೆಡ್ವಾರ್ ಸಮೀಪದ ದ್ವೀಪವೊಂದನ್ನು ಯುನೈಟೆಡ್ ಸ್ಟೇಟ್ ಆಫ್ ಕೈಲಾಸ ದೇಶ ಎಂದು ಹೆಸರಿಟ್ಟುಕೊಂಡಿದ್ದರು.
ನಿತ್ಯಾನಂದ ಇದೀಗ ತಮ್ಮದೇ ಆದ ಕೈಲಾಸ ದೇಶದಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ತಮ್ಮ ಕೈಲಾಸ ದೇಶದ ಪ್ರತಿನಿಧಿ ವಿಜಯಪ್ರಿಯ ನಿತ್ಯಾನಂದ ಜಿನಿವಾದಲ್ಲಿ ನಡೆದ ವಿಶ್ವ ಸಂಸ್ಥೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಡಿಯೋವನ್ನು ನಿತ್ಯಾನಂದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಕೈಲಾಸ ದೇಶಕ್ಕೆ ಹೋಗುವವರಿಗೆ ಇ-ಪೌರತ್ವ ನೀಡಲು ಮುಂದಾಗಿರುವುದಾಗಿ ನಿತ್ಯಾನಂದ ಘೋಷಣೆ ಹೊರಡಿಸಿದ್ದರು. ಈ ಬಗ್ಗೆ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ನಿತ್ಯಾನಂದ ಯುನೈಟೆಡ್ ಸ್ಟೇಟ್ ಆಫ್ ಕೈಲಾಸಕ್ಕೆ ಉಚಿತ ಪೌರತ್ವಕ್ಕೆ ಅರ್ಜಿಯನ್ನ ಆಹ್ವಾನಿಸಿದ್ದರು
ನಿತ್ಯಾನಂದ ಸ್ವಾಮೀಜಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಬ್ಬರ ಅನುಯಾಯಿಗಳಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇತ್ತೀಚೆಗೆ ಜಾಮೀನುರಹಿತ ವಾರಂಟ್ ಜಾರಿಗೊಳಿಸಿ ಆದೇಶ ನೀಡಿತ್ತು. ಈ ಪ್ರಕರಣದ 3ನೇ ಆರೋಪಿಯಾದ ಶಿವವಲ್ಲಬನೇನಿ ಹಾಗೂ 6ನೇ ಆರೋಪಿ ಜಮುನಾರಾಣಿ ಇಬ್ಬರಿಗೂ ಜಾಮೀನುರಹಿತ ವಾರಂಟ್ ಜಾರಿ ಮಾಡಲಾಗಿತ್ತು.
ಇದನ್ನೂ ಓದಿ: ನಿತ್ಯಾನಂದ ಸ್ವಾಮೀಜಿಯ ಇಬ್ಬರು ಅನುಯಾಯಿಗಳಿಗೆ ಜಾಮೀನು ರಹಿತ ವಾರಂಟ್ ಜಾರಿ