ಬೆಂಗಳೂರು: ಎಸ್ಡಿಆರ್ಎಫ್ ಹಣವನ್ನು ಕೊರೊನಾ ನಿಯಂತ್ರಣಕ್ಕೆ ಬೇಕಾದ ಔಷಧ, ಸ್ವಚ್ಛತೆ, ಉಪಕರಣಗಳ ಖರೀದಿ, ಪೊಲೀಸ್ ಭದ್ರತೆ ಹಾಗೂ ಅಗ್ನಿಶಾಮಕ ಇಲಾಖೆಗೆ ಬಳಸುವಂತೆ ಕೇಂದ್ರ ಗೃಹ ಇಲಾಖೆ ಸೂಚಿಸಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ನಿಯಂತ್ರಣಕ್ಕೆ ಎಸ್ಡಿಆರ್ಎಫ್ನ ಪ್ರಕೃತಿ ವಿಕೋಪ ನಿರ್ವಹಣಾ ನಿಧಿಯಲ್ಲಿ ಮೀಸಲಿರುವ 84 ಕೋಟಿ ರೂ. ಖರ್ಚು ಮಾಡಲು ಕೇಂದ್ರ ಗೃಹ ಇಲಾಖೆ ನಿರ್ದೇಶನ ನೀಡಿದೆ ಎಂದರು.
ಈಗಾಗಲೇ ಎಸ್ಡಿಆರ್ಎಫ್ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಎಸ್ಡಿಆರ್ಎಫ್ ಮೀಸಲು ಹಣದಲ್ಲಿ ಶೇ.25 ರಷ್ಟು ಹಣ ಬಳಸಲು ಕೇಂದ್ರ ಅನುಮತಿ ನೀಡಿದೆ. ಕೊರೊನಾ ವೈರಸ್ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿರುವ ಹಿನ್ನೆಲೆ ಕೇಂದ್ರದ ಹಣ ಬಳಕೆಗೆ ಒಪ್ಪಿಗೆ ಸಿಕ್ಕಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಜೊತೆ ಸಭೆ ನಡೆಸಿ ಹಣ ಬಳಕೆ ಕುರಿತು ಎಲ್ಲಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ. ಇದುವರೆಗೆ ರಾಜ್ಯ ಸರ್ಕಾರವೇ ಹಣ ಖರ್ಚು ಮಾಡಬೇಕಿತ್ತು. ಈಗ ಕೇಂದ್ರ ಸರ್ಕಾರದ ಹಣ ಖರ್ಚು ಮಾಡಲು ಅನುಮತಿ ಸಿಕ್ಕಿದೆ ಎಂದು ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ರು.