ಬೆಂಗಳೂರು : ಅಕ್ರಮ ಲೇವಾದೇವಿ ವ್ಯವಹಾರ ಸಂಬಂಧ ನಗರದ ಇಂಜಾಜ್ ಇಂಟರ್‌ನ್ಯಾಷನಲ್ ಹಾಗೂ ಅದರ ಪಾಲುದಾರರಾದ ಮಿಸ್ಬಾವುಬ್ದೀನ್ ಮತ್ತು ಸುಹೀಲ್ ಅಹ್ಮದ್ ಶರೀಫ್ ಎಂಬವರಿಗೆ ಸೇರಿದ 20.16 ಕೋಟಿ ರೂಪಾಯಿ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ವಿವರ: ಇಂಜಾಜ್ ಇಂಟರ್‌ನ್ಯಾಷನಲ್ ಮತ್ತು ಅದರ ಅಂಗಸಂಸ್ಥೆೆಗಳು ಸಾರ್ವಜನಿಕರಿಗೆ ಅಧಿಕ ಬಡ್ಡಿ, ಆಕರ್ಷಕ ಬಹುಮಾನ ಹಾಗೂ ಇತರೆ ಆಮಿಷಗಳನ್ನೊಡ್ಡಿ ಲಕ್ಷಾಂತರ ರೂ. ಹೂಡಿಕೆ ಮಾಡಿಸಿಕೊಂಡಿತ್ತು. 2015ರಿಂದ 2017ರ ಅವಧಿಯಲ್ಲಿ ನೂರಾರು ಮಂದಿಯಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಳ್ಳಲಾಗಿದೆ. ಆ ಬಳಿಕ ಹೂಡಿಕೆದಾರರಿಗೆ ಬಡ್ಡಿ ಅಥವಾ ಇತರೆ ಸೌಲಭ್ಯಗಳನ್ನು ನೀಡದೆ ವಂಚಿಸಿತ್ತು. ಇದ ಜತೆಗೆ ಸಂಸ್ಥೆೆಯು, ತನ್ನ ಖಾತೆಯಲ್ಲಿದ್ದ ಸಾರ್ವಜನಿಕರ ಕೋಟ್ಯಂತರ ರೂ.ಅನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದೆ. ಹೀಗೆ ಸುಮಾರು 80.99 ಕೋಟಿ ರೂ. ವಂಚಿಸಿದೆ. ಕೆಲವು ವರ್ಷಗಳ ಹಿಂದೆ ವಿಲ್ಸನ್‌ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸ್ಥಳೀಯ ಪೊಲೀಸರ ತನಿಖೆಯಲ್ಲಿ ಸಂಸ್ಥೆೆ ಅಕ್ರಮ ಹಣಕಾಸು ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ. ಇಡಿ ಅಧಿಕಾರಿಗಳು ಇಸಿಐಆರ್ ತನಿಖೆ ಕೈಗೊಂಡು ವಂಚನೆ ಆರೋಪ ಎದುರಿಸುತ್ತಿರುವ ಸಂಸ್ಥೆೆ ಹಾಗೂ ಅದರ ಪಾಲುದಾರರಿಗೆ ಸೇರಿದ 20.16 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳಾದ ಫ್ಲ್ಯಾಟ್‌ಗಳು, ಭೂಮಿ, ಕೃಷಿಯೇತರ ಜಮೀನುಗಳನ್ನು ವಶಕ್ಕೆೆ ಪಡೆದಿದ್ದಾರೆ.
ಇದನ್ನೂ ಓದಿ : ನಕಲಿ ದಾಖಲಾತಿ ಸೃಷ್ಟಿಸಿ ಕೋಟ್ಯಂತರ ಮೌಲ್ಯದ ಆಸ್ತಿ ಕಬಳಿಸಲು ಯತ್ನ ಆರೋಪ: ಇಬ್ಬರ ಮೇಲೆ ಎಫ್ಐಆರ್
ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ವಂಚನೆ: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಒಳ್ಳೆಯ ಲಾಭಾಂಶ ಗಳಿಸಬಹುದು ಎಂದು ಹಲವರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಂಗಳೂರು ಸಿಸಿಬಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಕೇರಳದ ಮಲಪ್ಪುರಂ ನಿವಾಸಿ ಹಂಝಾ ಎಂದು ಗುರುತಿಸಲಾಗಿದೆ.
ಆರೋಪಿಯು ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ಹಣ ಲಾಭ ಗಳಿಸಬಹುದು ಎಂದು ಹಲವರಿಂದ ಹಣ ಪಡೆದುಕೊಂಡಿದ್ದ. ಅಲ್ಲದೇ ತಿಂಗಳಿಗೆ ಶೇ.25ರಷ್ಟು ಲಾಭಾಂಶ ನೀಡುವುದಾಗಿ ಆಮಿಷ ಒಡ್ಡುತ್ತಿದ್ದನು. ಮಂಗಳೂರು ನಗರದ ಕಣ್ಣೂರು ನಿವಾಸಿ ಹಾಗೂ ಇತರರಿಂದ ಕೋಟ್ಯಾಂತರ ರೂಪಾಯಿಯನ್ನು ಪಡೆದು ವಂಚಿಸಿರುವುದಾಗಿ ತಿಳಿದುಬಂದಿದೆ.
ಸದ್ಯ, ಲಾಭಾಂಶ ನೀಡದೇ ವಂಚನೆ ಮಾಡಿದ ಪ್ರಕರಣ ಸಂಬಂಧ ಆರೋಪಿ ಹಂಝಾನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಪೊಲೀಸ್ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗ್ಡೆ, ಪೊಲೀಸ್ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಹೆಚ್.ಎಂ., ಪಿಎಸ್‌ಐ ರಾಜೇಂದ್ರ ಹಾಗೂ ಸಿಸಿಬಿ ಸಿಬ್ಬಂದಿ ಭಾಗಿಯಾಗಿದ್ದರು.
ಇನ್ನೊಂದು ಪ್ರಕರಣದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಅಧಿಕ ಲಾಭಾಂಶ ಗಳಿಸಬಹುದೆಂದು ಜನರಿಂದ ಹಣ ಪಡೆದು ವಂಚಿಸಿರುವ ಆರೋಪಿಯನ್ನು ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೇರಳದ ಕ್ಯಾಲಿಕಟ್ನ ಜಿಜೊ ಜಾನ್ ಪಿಕೆ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ : ಕ್ರಿಪ್ಟೋ ಕರೆನ್ಸಿ ಅವ್ಯವಹಾರ ಪ್ರಕರಣ-ಆರೋಪಿ ಸೆರೆ