ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಉದ್ಯಮಿಯಾಗುವ ಉದ್ಯೋಗ ಕೊಡು ಹಾಗೂ ಕೈಗಾರಿಕಾ ಅದಾಲತ್ಗೆ ಅಕ್ಟೋಬರ್ 11ರಂದು ವಿಧ್ಯುಕ್ತ ಚಾಲನೆ ನೀಡಲು ಬೆಂಗಳೂರು ಕಂದಾಯ ವಿಭಾಗದ ಕೈಗಾರಿಕಾ ಸಂಸ್ಥೆಗಳ ಮುಖಂಡರ ಜೊತೆ ನಡೆಸಿದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಧ್ಯಕ್ಷತೆಯಲ್ಲಿ ಬೆಂಗಳೂರು ಕಂದಾಯ ವಿಭಾಗದ ಕೈಗಾರಿಕಾ ಸಂಸ್ಥೆಗಳ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ
ವಿದ್ಯಾವಂತ ಯುವಕರನ್ನು ಉದ್ಯಮದತ್ತ ಆಕರ್ಷಿಸಿ, ಸ್ವಯಂ ಉದ್ಯಮಿಗಳಾಗಿ ಮಾಡುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ಹಮ್ಮಿಕೊಂಡಿರುವ ಉದ್ಯಮಿಯಾಗು ಉದ್ಯೋಗ ಕೊಡು ಹಾಗೂ ಕೈಗಾರಿಕಾ ಅದಾಲತ್ ಅನ್ನು ಅ.11 ಮತ್ತು 12ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಮೊದಲ ದಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ಅ.12ರಂದು ಕೈಗಾರಿಕಾ ಅದಾಲತ್ ನಡೆಯಲಿದೆ. ಕೈಗಾರಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ವಿನೂತನ ಕಾರ್ಯಕ್ರಮ ಇದಾಗಿದೆ. ಬೆಂಗಳೂರು ಕಂದಾಯ ವಿಭಾಗದ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿರುವ ಉದ್ಯಮಿಗಳು ಭಾಗವಹಿಸಲಿದ್ದಾರೆ.
ಮೊದಲ ದಿನ ಉದ್ಯಮಿಯಾಗು ಉದ್ಯೋಗ ಕೊಡು ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಉದ್ಯಮಿಗಳು ಕೈಗಾರಿಕಾ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ಕನ್ನಡಿಗರೇ ಆದ ಕೋ ರಾಧಾಕೃಷ್ಣ, ಜಿರೋದಾ ನಿತನ್, ನಿಖಿಲ್ ಕಾಮತ್, ಪಡ್ಕೆ ಸೇರಿದಂತೆ ಮತ್ತಿತರ ಉದ್ಯಮಿಗಳನ್ನು ಆಹ್ವಾನಿಸಿ ನೂತನ ಉದ್ಯಮಿಗಳಿಗೆ ವಿಶೇಷ ಉಪನ್ಯಾಸ, ಮಾರ್ಗದರ್ಶನ, ಸಲಹೆ ನೀಡಲಾಗುವುದು.
ಬೆಂಗಳೂರು ಕಂದಾಯ ವಿಭಾಗದ ವಿವಿಧ ಜಿಲ್ಲೆಗಳಿಂದ ಒಟ್ಟು 10 ಸಾವಿರ ಜನರು ಆಗಮಿಸಲಿದ್ದಾರೆ. ವೈಮಾನಿಕ, ರಕ್ಷಣಾ ಕ್ಷೇತ್ರದಲ್ಲಿ ಉದ್ಯೋಗಗಳು, ಹೂಡಿಕೆಗಿರುವ ಅವಕಾಶಗಳ ಬಗ್ಗೆ ಚರ್ಚೆ ನಡೆಯಲಿದೆ. ಸ್ಮಾರ್ಟ್ ಅಪ್ ಉದ್ಯೋಗ ಸೃಷ್ಟಿಸುವುದು, ಆರೋಗ್ಯ ಕ್ಷೇತ್ರ, ಶಿಕ್ಷಣ, ಎಜು ಟೆಕ್ನಾಲಜಿ, ಹೂಡಿಕೆ ಮಾಡುವುದು, ಬ್ಯಾಂಕಿಂಗ್ ವಲಯದಿಂದ ಸಾಲ ಸೌಲಭ್ಯ ಸೇರಿ ಹಲವು ರೀತಿಯ ಕಾರ್ಯಕ್ರಮಗಳು ಜರುಗಲಿವೆ.
ಜಿಲ್ಲಾವಾರು ವರ್ಗೀಕರಣ : 2ನೇ ದಿನದ ಕೈಗಾರಿಕಾ ಅದಾಲತ್‍ನಲ್ಲಿ ಪ್ರಮುಖವಾಗಿ ಕೈಗಾರಿಕಾ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ಬಗ್ಗೆ ಸಚಿವರು, ಇಲಾಖೆಯ ಅಧಿಕಾರಿಗಳು ಪರಿಹರಿಸಲು ಆದ್ಯತೆ ನೀಡುವರು.
ಕೈಗಾರಿಕಾ ಅದಾಲತ್ ನಡೆಸುವ ಸಂಬಂಧ ಜಿಲ್ಲಾವಾರು ವರ್ಗೀಕರಣ ಮಾಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜೊತೆಗೆ ಕೈಗಾರಿಕಾ ಸಂಘ-ಸಂಸ್ಥೆಗಳು ತಮ್ಮ ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತಂದರೆ ಸ್ಥಳದಲ್ಲಿಯೇ ಇತ್ಯರ್ಥ ಪಡಿಸಲಿದ್ದಾರೆ.
ಉದ್ಯಮಿದಾರರ ಮನವೊಲಿಕೆ : ಸಭೆಯಲ್ಲಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕೈಗಾರಿಕಾ ಅದಾಲತ್, ಕಾರ್ಯಾಗಾರವನ್ನು 6 ವಿಭಾಗಗಳಲ್ಲಿ ನಡೆಸಲಾಗುವುದು. ಸರ್ಕಾರವೇ ಉದ್ಯಮಿಗಳ ಮನೆ ಬಾಗಿಲಿಗೆ ಹೋಗಿ, ಉದ್ಯಮಿದಾರರ ಮನವೊಲಿಸಲಿದೆ ಎಂದು ಹೇಳಿದರು.
ಸಮಸ್ಯೆಗಳ ಇತ್ಯರ್ಥ : ಸಭೆಯಲ್ಲಿ ಬಹುತೇಕ ಸಂಘ-ಸಂಸ್ಥೆಯ ಮುಖ್ಯಸ್ಥರು ಪ್ರಮುಖವಾಗಿ ವಿದ್ಯುತ್ ಸೇರಿದಂತೆ ಪ್ರಮುಖ ಮೂಲಸೌಲಭ್ಯಗಳ ಬಗ್ಗೆ ಸಚಿವರ ಗಮನ ಸೆಳೆದರು. ಇದಕ್ಕೆ ಸ್ಥಳದಲ್ಲೇ ಸ್ಪಂದಿಸಿದ ಸಚಿವ ನಿರಾಣಿ, ಉದ್ಯಮಿಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಿ ಕೊಡಲು ಸರ್ಕಾರ ಬದ್ಧವಾಗಿದೆ.
ಇದರ ಬಗ್ಗೆ ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ. ಯಾರಿಗೆ ಎಷ್ಟು ವಿದ್ಯುತ್ ಬೇಕು ಎಂದು ಅಂದಾಜಿಸಲಾಗುವುದು. ಈ ಸಂಬಂಧ ಇಂಧನ ಸಚಿವರ ಜೊತೆ ಖುದ್ದು ನಾನೇ ಸಭೆ ಕರೆಯಲಿದ್ದೇನೆ. ನೀವು ಆತಂಕಕ್ಕೆ ಒಳಗಾಗಬೇಡಿ ಎಂದು ಸಲಹೆ ನೀಡಿದರು.