ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಜನಪ್ರತಿಧಿಗಳು, ಸಾರ್ವಜನಿಕರು ಕೇಂದ್ರ ಸರ್ಕಾರದ ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಿದೆ.
ಪ್ರಮುಖವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದವರು ಮತ್ತು ಮಾಸ್ಕ್ ಧರಿಸದವರ ವಿರುದ್ಧ ಸಾರ್ವಜನಿಕರೇ ಖುದ್ದಾಗಿ ದೂರು ಸಲ್ಲಿಸಲು ಮುಂದಿನ ಒಂದು ವಾರದೊಳಗೆ ಕುಂದು ಕೊರತೆ ನಿವಾರಣಾ ಸಮಿತಿ ರಚಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಈ ನಿರ್ದೇಶನ ನೀಡಿದೆ.
ನಿರ್ದೇಶನಗಳು:
ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಲು ಸರ್ಕಾರ ಕುಂದುಕೊರತೆ ನಿವಾರಣಾ ಘಟಕ ಸ್ಥಾಪಿಸಬೇಕು.
- ವಾಟ್ಸ್ಆ್ಯಪ್, ಇಮೇಲ್, ಎಸ್ಎಂಎಸ್ ಮೂಲಕ ದೂರು ಸಲ್ಲಿಸಲು ವ್ಯವಸ್ಥೆ ರೂಪಿಸಬೇಕು.
- ತುರ್ತು ಸಹಾಯವಾಣಿ 100ಕ್ಕೆ ಕರೆ ಮಾಡಿ ದೂರು ಸಲ್ಲಿಸಲು ವ್ಯವಸ್ಥೆ ಮಾಡಬೇಕು.
- ಘಟಕಕ್ಕೆ ಬಂದ ದೂರನ್ನು ಅಧಿಕಾರಿಗಳು ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ರವಾನಿಸಬೇಕು.
- ಪೊಲೀಸರು ದೂರಿನ ಮೇರೆಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
- ಮಾಸ್ಕ್ ಧರಿಸಿದವರ ವಿರುದ್ಧ ಸ್ಥಳದಲ್ಲಿ ದಂಡ ವಿಧಿಸಲು ಅಧಿಕಾರಿಗಳಿಗೆ ಅಧಿಕಾರ ನೀಡಬೇಕು.
- ಕುಂದುಕೊರತೆ ನಿವಾರಣಾ ಘಟಕ ಕುರಿತು ಸಾರ್ವಜನಿಕರಿಗೆ ಮಾಹಿತಿ ಸಿಗುವಂತೆ ವ್ಯಾಪಕ ಪ್ರಚಾರ ಮಾಡಬೇಕು.