ಬೆಂಗಳೂರು : ಕೊರೊನಾ ಇದೆ, ಕುಡಿದು ವಾಹನ ಚಲಾಯಿಸಿದರೆ ಪೊಲೀಸರು ನಮ್ಮನ್ನು ತಪಾಸಣೆಗೆ ಒಳಪಡಿಸಲ್ಲ ಎಂದು ಹೋದರೆ ದಂಡ ಬೀಳುವುದು ಖಚಿತ. ಕೊರೊನಾ ಇದ್ದರೂ ಕುಡಿದು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಮೊದಲು ರಕ್ತಮಾದರಿ ಪರೀಕ್ಷೆಗೆ ಒಳಪಡಿಸಿ ನಂತರ ದಂಡ ಹಾಕುತ್ತಿದ್ದಾರೆ. ಅಲ್ಲದೆ, ಸಂಚಾರಿ ಪೊಲೀಸರು ನಗರದ ಪ್ರಮುಖ ಕಚೇರಿಗಳಲ್ಲಿ ಕುಳಿತು ಸಿಗ್ನಲ್ ಬಳಿ ಹಾಗೂ ರಸ್ತೆಯಲ್ಲಿ ಓಡಾಡುವವರ ಚಲನವಲನಗಳನ್ನು ಆಧರಿಸಿ ದಂಡ ಹಾಕುತ್ತಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಕಡಿಮೆ ಪ್ರಕರಣಗಳು ದಾಖಲಾಗಿವೆ. 2019ರಲ್ಲಿ 40,602 ಪ್ರಕರಣ, 2020ರಲ್ಲಿ ಕೇವಲ 5,277 ಪ್ರಕರಣ ಸಿಕ್ಕಿವೆ. ಒಮ್ಮೆ ಸಿಕ್ಕಿಬಿದ್ದರೆ ₹5,000 ದಂಡ, 2ನೇ ಬಾರಿಗೆ ₹10,000, 3ನೇ ಬಾರಿಗೆ ಪರವಾನಗಿ ರದ್ದು ಮಾಡಲಾಗುತ್ತಿದೆ.
ಈ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಅನ್ಲಾಕ್ ಪ್ರಕ್ರಿಯೆಯಿಂದ ವಾಹನ ಸವಾರರ ಓಡಾಟ ಹೆಚ್ಚಾಗಿದೆ. ನಿಯಮ ಉಲ್ಲಂಘಿಸಿದವರಿಗೆ ತಂತ್ರಜ್ಞಾನದ ಮೂಲಕ ದಂಡ ಮಾತ್ರವಲ್ಲದೇ ಸಿಗ್ನಲ್ಗಳಲ್ಲೂ ದಂಡ ವಿಧಿಸಲಾಗುತ್ತಿದೆ. ಕಳೆದ ಕೆಲ ದಿನಗಳಲ್ಲಿ ₹2.5 ಕೋಟಿ ದಂಡ ವಸೂಲಿಯಾಗಿದೆ ಎಂದರು.
ಸಿಗ್ನಲ್ ಬಳಿ ಇರುವ ಸಿಸಿಟಿವಿ, ಡಿಜಿಟಲ್ ತಂತ್ರಜ್ಞಾನ ಮುಖಾಂತರ ಅಡ್ಡಾದಿಡ್ಡಿ ಚಾಲನೆ, ರ್ಯಾಶ್ ಡ್ರೈವಿಂಗ್ ಹೀಗೆ ವಾಹನ ಸವಾರರ ಚಲನವಲನ ಗಮನಿಸಿ ಪ್ರಕರಣ ದಾಖಲಿಸಿ ದಂಡ ಕೂಡ ಜಾರಿ ಮಾಡುತ್ತೇವೆ. ಬಹಳ ಮಂದಿ ಕುಡಿದು ರಾಜಾರೋಷವಾಗಿ ಓಡಾಡುತ್ತಾರೆ. ಕುಡಿದಿರುವ ಮಾಹಿತಿ ಗೊತ್ತಾದ್ರೆ ರಕ್ತ ಪರೀಕ್ಷೆ ನಡೆಸಿ ದಂಡ ವಿಧಿಸಲಾಗುವುದು ಎಂದರು.