ಬೆಂಗಳೂರು : ಗಣೇಶ ನಿಮಜ್ಜನ ವೇಳೆ ಮೆರವಣಿಗೆ ನಡೆಯುವ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ನಗರದಲ್ಲಿ ಮದ್ಯದಂಗಡಿಗಳನ್ನು ಮುಚ್ಚುವಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಆದೇಶ ಹೊರಡಿಸಿದ್ದಾರೆ.
ನಗರದ ವಿವಿಧ ಭಾಗಗಳಲ್ಲಿ ನಿಗದಿತ ದಿನಗಳಲ್ಲಿ ಮದ್ಯದಂಗಡಿ ತೆರೆಯುವುದಿಲ್ಲ. ಅಲ್ಲದೆ ಕೆಲ ಪ್ರದೇಶಗಳಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಬೆಂಗಳೂರಿನ ಕೇಂದ್ರ, ಉತ್ತರ, ಪೂರ್ವ ಮತ್ತು ಈಶಾನ್ಯ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿದೆ. ಉತ್ತರ ವಿಭಾಗದ ಜೆಸಿ ನಗರ, ಆರ್ಟಿ ನಗರ, ಹೆಬ್ಬಾಳ ಹಾಗೂ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 21ರ ಬೆಳಗ್ಗೆ 6ರಿಂದ 22ರ ಬೆಳಗ್ಗೆ 6ವರೆಗೂ ಮಧ್ಯ ಮಾರಾಟ ನಿಷೇಧಿಸಲಾಗಿದೆ.
ಪೂರ್ವ ವಿಭಾಗದ ಡಿಜೆ ಹಳ್ಳಿ, ಭಾರತಿ ನಗರ ಹಾಗೂ ಪುಲಿಕೇಶಿನಗರದಲ್ಲಿ ಸೆಪ್ಟಂಬರ್ 23 ರ ಬೆಳಗ್ಗೆ 6 ರಿಂದ 24 ರ ಬೆಳಗ್ಗೆ 6 ವರೆಗೂ ನಿಷೇಧ ಹೇರಲಾಗಿದೆ. ಕಮರ್ಷಿಯಲ್ ಸ್ಟ್ರೀಟ್ ಹಲಸೂರು ಶಿವಾಜಿನಗರ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 24 ಬೆಳಗ್ಗೆ 6 ರಿಂದ 25 ಬೆಳಗ್ಗೆ 6 ವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಈಶಾನ್ಯ ವಿಭಾಗದ ವಿದ್ಯಾರಣ್ಯಪುರ, ಯಲಹಂಕ, ಯಲಹಂಕ ಉಪನಗರ, ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 23ರ ಸಂಜೆ 6 ರಿಂದ 25 ಬೆಳಗ್ಗೆ 6 ಗಂಟೆವರೆಗೂ ನಿಷೇಧಿಸಿದರೆ, ಕೇಂದ್ರ ವಿಭಾಗದ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 30 ರ ಬೆಳಗ್ಗೆ 6 ರಿಂದ ಅಕ್ಟೋಬರ್ 1 ರ ಬೆಳಗ್ಗೆ 6 ಗಂಟೆಯವರೆಗೂ ಮಧ್ಯ ಮಾರಾಟ ನಿಷೇಧಿಸಲಾಗಿದೆ.
ನಿಮಜ್ಜನ ಸ್ಥಳಗಳಲ್ಲಿ ನುರಿತ ಈಜುಗಾರರನ್ನು ನಿಯೋಜಿಸುತ್ತಿರುವ ಪಾಲಿಕೆ : ನಗರದಲ್ಲಿ ಗಣೇಶ ಹಬ್ಬದ ತಯಾರಿ ಜೋರಾಗಿತ್ತು. ಬಿಬಿಎಂಪಿ ಪಾಲಿಕೆಯಿಂದ ಗಣೇಶ ನಿಮಜ್ಜನೆಗೆ ಕೆರೆ ಕಲ್ಯಾಣಿಗಳು ಸಿದ್ಧವಾಗಿದ್ದು, ಅನಾಹುತ ತಪ್ಪಿಸಲು ಪಾಲಿಕೆ ನುರಿತ ಈಜುಗಾರರನ್ನು ತಾತ್ಕಾಲಿಕವಾಗಿ ನಿಯೋಜಿಸಿತ್ತು. ಮನೆ, ಕಚೇರಿ ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ವಿಸರ್ಜನೆಗೆ ನೂರಕ್ಕೂ ಅಧಿಕ ಸ್ಥಳಗಳನ್ನು ಪಾಲಿಕೆ ವ್ಯವಸ್ಥೆ ಮಾಡಿದೆ. ಗಣೇಶ ಮೂರ್ತಿ ನಿಮಜ್ಜನೆಗೆ ಮನೆಗಳಿಗೆ ಹತ್ತಿರದಲ್ಲಿಯೇ ಪ್ರತ್ಯೇಕ ವ್ಯವಸ್ಥೆಯನ್ನು ಬಿಬಿಎಂಪಿ (ಸೆಪ್ಟೆಂಬರ್ 16-2023) ಮಾಡಿತ್ತು.
ಪಾಲಿಕೆಯ 8 ವಲಯಗಳ 27 ವಿಧಾನಸಭಾ ಕ್ಷೇತ್ರಗಳಲ್ಲಿ ತಾತ್ಕಾಲಿಕ ಸಂಚಾರಿ ಟ್ಯಾಂಕರ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. 5 ಇಂಚಿನಿಂದ 3 ಅಡಿ ಎತ್ತರದ ಎಲ್ಲ ಮಣ್ಣಿನ ಗಣೇಶ ಮೂರ್ತಿಗಳನ್ನು ಮೊಬೈಲ್ ಟ್ಯಾಂಕರ್‌ಗಳಲ್ಲಿ ನಿಮಜ್ಜನ ಮಾಡಲು ತಯಾರಿ ನಡೆಸಿತ್ತು. ದೊಡ್ಡ ಮೂರ್ತಿಗಳ ನಿಮಜ್ಜನ ಮಾಡಲು ಒಟ್ಟು 12 ತಾತ್ಕಾಲಿಕ ಕಲ್ಯಾಣಿಗಳನ್ನು ಬಿಬಿಎಂಪಿ ವ್ಯವಸ್ಥೆ ಮಾಡಿತ್ತು.
ನಗರದ ಯಡಿಯೂರು, ಹೆಬ್ಬಾಳ, ಸ್ಯಾಂಕಿ ಟ್ಯಾಂಕಿ ಕೆರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗಣೇಶ ನಿಮಜ್ಜನೆಗೆ ಜನರು ಬರುವ ಸಾಧ್ಯತೆ ಇದ್ದು, ಕಲ್ಯಾಣಿಗಳಲ್ಲಿ ಹೊಳೆತ್ತಿ, ಸ್ವಚ್ಛಗೊಳಿಸಿ, ಬಣ್ಣ ಬಳಿಯಲಾಗಿತ್ತು. ನಗರದ ಯಡಿಯೂರು ಕೆರೆಯಲ್ಲಿ ದೊಡ್ಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗಣೇಶ ನಿಮಜ್ಜನ ಮಾಡಲು ಬರುವ ಸಾಧ್ಯತೆ ಇರುವುದರಿಂದ ಹೈಟೆಕ್ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: ರಾಜಧಾನಿಯಲ್ಲಿ ಗಣೇಶ ಹಬ್ಬದ ತಯಾರಿ ಜೋರು: ನಿಮಜ್ಜನ ಸ್ಥಳಗಳಲ್ಲಿ ನುರಿತ ಈಜುಗಾರರನ್ನು ನಿಯೋಜಿಸುತ್ತಿರುವ ಪಾಲಿಕೆ