ಬೆಂಗಳೂರು: ಐಎಂಎ ವಂಚನೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಬಿಐ, ಹಗರಣದ ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್ ವಿಚಾರಣೆ ನಡೆಸಲು ಐದು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಕೋರಿತ್ತು. ಹೀಗಾಗಿ ಸಿಬಿಐ ಸ್ಪೆಷಲ್ ಕೋರ್ಟ್ ಮನ್ಸೂರ್ ಖಾನ್, ನಿಜಾಮುದ್ದೀನ್, ನಾಸೀರ್ ಹುಸೇನ್, ನವೀದ್ ಅಹಮದ್, ವಸೀಮ್, ಅಶ್ರನ್ ಖಾನ್, ಅಪ್ಸರ್ ಪಾಷ ಹಾಗೂ ದಾದಾ ಪೀರ್ ಸೇರಿ ಒಟ್ಟು 8 ಮಂದಿ ಆರೋಪಿಗಳನ್ನು ವಶಕ್ಕೆ ಒಪ್ಪಿಸಿದೆ.
ಬಾಡಿ ವಾರೆಂಟ್ ಮೂಲಕ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಮನ್ಸೂರು ಸೇರಿ ಉಳಿದ ಆರೋಪಿಗಳನ್ನ ವಶಕ್ಕೆ ಪಡೆದು, ಹೆಬ್ಬಾಳ ಬಳಿ ಇರುವ ಸಿಬಿಐ ಕೇಂದ್ರ ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.
ಈಗಾಗಲೇ ಎಸ್ಐಟಿ ತಂಡ ಸಿಬಿಐಗೆ ತನಿಖೆಯ ಪ್ರಾಥಮಿಕ ವರದಿಯವನ್ನು ಹಸ್ತಾಂತರಿಸಿದೆ. ಈ ತನಿಖಾ ವರದಿಯ ಆಧಾರದ ಮೇಲೆ ಸಿಬಿಐ ಮನ್ಸೂರ್ನಿಂದ ಅಗತ್ಯ ಮಾಹಿತಿ ಕಲೆ ಹಾಕಿ, ಮತ್ತಷ್ಟು ಮಂದಿಯನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ.