ಬೆಂಗಳೂರು: ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನಲಾದ ಕೆ ಎಸ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಕೇಳಿದ್ದೆ ನಾನು ನಿನ್ನೆ. ಆತನ ಮೇಲೆ ಯಾವುದಾದರೂ ದೂರುಗಳಿದ್ದರೆ, ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಇಲಾಖೆ ಸಿಬ್ಬಂದಿಗೆ ನೀಡಲಾಗುವ ಕೇಂದ್ರ ಗೃಹ ಸಚಿವಾಲಯದ ಪ್ರಶಸ್ತಿಗೆ ಪಾತ್ರರಾದ ವಿಜೇತರಿಗೆ ಪದಕ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಎಂಬುವರ ಬಗ್ಗೆ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಮಾಹಿತಿ ಇರಬೇಕು. ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಅಲ್ಲವೆ. ನನಗೆ ಅವರನ ಪರಿಚಯವಿಲ್ಲ. ಹೆಚ್ಡಿಕೆ ಅವಧಿಯಲ್ಲೇ ಅವನು ಎಲ್ಲ ವ್ಯವಹಾರಗಳನ್ನು ಮಾಡಿದ್ದಾನೆ ಎಂಬುದು ತಿಳಿದು ಬಂದಿದೆ. ಏನೇ ಇದ್ದರೂ ಕಾನೂನು ಕ್ರಮ ವಹಿಸಲಾಗುವುದು ಎಂದರು.
ಆತ ಯಾವುದಾದರೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ. ಪ್ರತಿನಿತ್ಯ ನನ್ನನ್ನು ನೂರಾರು ಜನರು ಅಹವಾಲು ಸಲ್ಲಿಸಲು ಭೇಟಿಯಾಗುತ್ತಾರೆ. ನನ್ನ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಕಾಣಲು ಬರುವ ಎಲ್ಲರ ಹಿನ್ನೆಲೆ ಅಥವಾ ಅವರ ಚರಿತ್ರೆ ಬಗ್ಗೆ ನನಗೆ ಮಾಹಿತಿ ಇರುವುದಿಲ್ಲ. ಫೋಟೋ ತೆಗೆಸಿಕೊಳ್ಳುವವರ ಜೊತೆ ಸರ್ಟಿಫಿಕೇಟ್ ತೆಗೆದುಕೊಂಡು ಬನ್ನಿ ಎಂದು ಹೇಳಲು ಸಾಧ್ಯವಿಲ್ಲ. ನನ್ನ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ ಎಂದ ಮಾತ್ರಕ್ಕೆ ನನಗೆ ಪರಿಚಯವಿದೆ ಎಂದರ್ಥವಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ಪೊಲೀಸ್ ಇಲಾಖೆ ದೇಶದಲ್ಲಿಯೇ, ಸೇವಾನಿಷ್ಠೆ, ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದೆ ಎಂದ ಸಚಿವರು, ಇಂದು ಪ್ರದಾನ ಮಾಡಲ್ಪಟ್ಟ ಗೌರವಗಳು ಪೊಲೀಸ್ ಇಲಾಖೆ ಸಿಬ್ಬಂದಿಗೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಪ್ರೇರಣೆಯಾಗಲಿದೆ. ಇಲಾಖೆಯ ಸಿಬ್ಬಂದಿ ದಕ್ಷತೆ ಹೆಚ್ಚಿಸಲು ಸರ್ಕಾರ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು, ಆದ್ಯತೆಯ ಮೇಲೆ ಗಮನ ನೀಡಲಾಗುತ್ತಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಕಾಂತಾರ ಸಿನಿಮಾದ ನಾಯಕಿ ಸಪ್ತಮಿ ಗೌಡ, ಡಿಜಿಪಿ ಪ್ರವೀಣ್ ಸೂದ್, ಅಪರ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಏನಿದು ಸ್ಯಾಂಟ್ರೋ ರವಿ ಪ್ರಕರಣ: ಕೆಲಸ ನೀಡುವ ಭರವಸೆ ನೀಡಿ, ತನ್ನ ಮೇಲೆ ಅತ್ಯಾಚಾರವೆಸಗಿ ಬಲವಂತವಾಗಿ ಮದುವೆಯಾಗಿದ್ದಾನೆ ಎಂದು ಯುವತಿಯೊಬ್ಬಳು ಸ್ಯಾಂಟ್ರೋ ರವಿ ವಿರುದ್ಧ ಆರೋಪಿಸಿದ್ದಾಳೆ. ಕೆಲಸಕ್ಕೆಂದು ಬಂದಾಗ ಜ್ಯೂಸ್ನಲ್ಲಿ ಮತ್ತು ಬೆರೆಸಿ ಅತ್ಯಾಚಾರ ನಡೆಸಿದ್ದಾರೆ. ಆ ವೇಳೆಯ ಚಿತ್ರಗಳನ್ನು ಸೆರೆಹಿಡಿದಿದ್ದ ಈತ ಅವುಗಳನ್ನು ತೋರಿಸಿ ಬ್ಲ್ಯಾಕ್ಮೇಲ್ ಮಾಡಿದ್ದಲ್ಲದೆ, ತನಗಿದ್ದ ಲೈಂಗಿಕ ಸೋಂಕನ್ನು ಮರೆಮಾಚಿ ಒತ್ತಾಯವಾಗಿ ಮದುವೆ ಕೂಡ ಆಗಿದ್ದಾನೆ. ಈ ವಿಷಯವನ್ನು ಯಾರಿಗೂ ಹೇಳದಂತೆಯೂ ಬೆದರಿಕೆಯೊಡ್ಡಿದ್ದನು. 2020 ಮಾರ್ಚ್ನಿಂದ ಆತನ ಜೊತೆ ಜೀವನ ನಡೆಸಲು ಪ್ರಾರಂಭಿಸಿದ್ದು, ಆ ಸಮಯದಲ್ಲಿ ವರದಕ್ಷಿಣೆ ನೀಡುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಿರುವ ಯುವತಿ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಸ್ಯಾಂಟ್ರೋ ರವಿ ವಿರುದ್ಧ ದೂರು ನೀಡಿದ್ದಾಳೆ.
ಆರೋಪಿ ಕುರಿತು ಹೆಚ್ಡಿಕೆ ಸ್ಫೋಟಕ ಹೇಳಿಕೆ: ಈ ಪ್ರಕರಣದ ಕುರಿತು ಬುಧವಾರ ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಯುವತಿ ಮೇಲೆ ಅತ್ಯಾಚಾರ ಎಸಗಿರುವ ಸ್ಯಾಂಟ್ರೋ ರವಿ ಜೊತೆ ಬಿಜೆಪಿಯ ಮಂತ್ರಿಗಳು ಸಂಪರ್ಕದಲ್ಲಿದ್ದಾರೆ. ಸ್ಯಾಂಟ್ರೋ ರವಿಗೆ ಐದು ಹೆಸರುಗಳಿವೆ. 1995ರಿಂದಲೂ ಈತನ ಮೇಲೆ ಕೇಸ್ಗಳಿವೆ. ಮೈಸೂರು, ಬೆಂಗಳೂರಿನಲ್ಲಿಯೂ ಎಷ್ಟೋ ಕೇಸ್ಗಳು ಈತನ ಮೇಲೆ ದಾಖಲಾಗಿವೆ ಎಂದು ಆರೋಪಿಸಿದ್ದರು.
ಕಳೆದ ತಿಂಗಳವರೆಗೆ ಬಿಜೆಪಿ ಸರ್ಕಾರ ಈತನಿಗೆ ಕುಮಾರಕೃಪದಲ್ಲೇ ರೂಂ ಕೊಟ್ಟಿತ್ತು. ಈತನ ಜೊತೆಗೆ ಮಂತ್ರಿಗಳ ವ್ಯವಹಾರ ನಡೆಯುವುದೇ ಕುಮಾರಕೃಪದಲ್ಲಿ. ಸಿಎಂ ಕೂಡ ನನಗೆ ಸಾರ್ ಅಂತಾರೆ, ಆದರೆ ನೀನು ನನಗೆ ಸಾರ್ ಅಂತಿಲ್ಲ ಎಂದು ಈತ ಪೊಲೀಸ್ ಅಧಿಕಾರಿಗೆ ಹೇಳ್ತಾನೆ. ಅಷ್ಟೇ ಅಲ್ಲ, ನೀನು ನಾಳೆ ಬಂದು ನೋಡು ಎಂದು ಪೊಲೀಸ್ ಅಧಿಕಾರಿ ಮೇಲೆ ದರ್ಪ ತೋರಿಸುತ್ತಾನೆ. ಏನಿದು? ಈ ರೀತಿಯ ಸರ್ಕಾರದ ಕೈಯಲ್ಲಿ ರಾಜ್ಯ ಉಳಿಯಲು ಸಾಧ್ಯವಿಲ್ಲ ಎಂದು ಹೆಚ್ಡಿಕೆ ಕಿಡಿಕಾರಿದ್ದರು.
ಇದನ್ನೂ ಓದಿ: ಕೆಲಸದ ಆಮಿಷಯೊಡ್ಡಿ ಯುವತಿ ಮೇಲೆ ಅತ್ಯಾಚಾರ.. ಆರೋಪಿಗೆ ಬಿಜೆಪಿ ಸಚಿವರ ಸಂಪರ್ಕ ಇದೆ ಎಂದ ಹೆಚ್ಡಿಕೆ