ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ತಮ್ಮ ಫೋಟೋ ಹಾಕಿಕೊಂಡು ಸೆಟ್ಟಾಪ್ ಬಾಕ್ಸ್ ಹಂಚುತ್ತಿರೋದನ್ನು ಒಪ್ಪಿಕೊಂಡಿದ್ದಾರೆ. ಚುನಾವಣಾ ಆಯೋಗ ಬದುಕಿದ್ದರೆ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ರಾಜ್ಯದ ಜನರಿಗೆ ವಿಜಯದಶಮಿ ಹಬ್ಬದ ಶುಭಾಶಯಗಳು. ಈ ವರ್ಷ ಎದುರಾಗಿರುವ ಕೊರೊನಾ ಸಂಕಷ್ಟಗಳನ್ನು ಆ ದೇವಿ ಹಾಗೂ ಭಗವಂತ ಆದಷ್ಟು ಬೇಗ ನಿವಾರಿಸಲಿ ಎಂದು ಪ್ರಾರ್ಥಿಸುತ್ತೇನೆ. ರಾಜರಾಜೇಶ್ವರಿ ನಗರದಲ್ಲಿ ಅಭ್ಯರ್ಥಿ ತಮ್ಮ ಕಂಪನಿ ಹೆಸರಲ್ಲಿ ಸೆಟ್ಟಾಪ್ ಬಾಕ್ಸ್ ಕೊಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಚುನಾವಣಾ ಆಯೋಗ ಬದುಕಿದ್ದರೆ, ಕಾನೂನಿಗೆ ರಕ್ಷಣೆ ಕೊಡುವುದಾದರೆ ತಕ್ಷಣ ಕ್ರಮ ಕೈಗೊಳ್ಳಲಿ ಎಂದಿದ್ದಾರೆ.
ಈ ವಿಚಾರದಲ್ಲಿ ಯಾರೂ ದೂರು ನೀಡಬೇಕಾದ ಅಗತ್ಯವಿಲ್ಲ. ಅಭ್ಯರ್ಥಿ ಅದು ನನ್ನ ವ್ಯವಹಾರ ಅಂತಾ ಒಪ್ಪಿಕೊಂಡಿದ್ದಾರೆ. ಅದು ವ್ಯವಹಾರವಾಗಿದ್ದರೆ ತಮ್ಮ ಫೋಟೋ ಹಾಕಿಕೊಂಡು ಕೊಡಲು ನೀತಿ ಸಂಹಿತೆಯಲ್ಲಿ ಅವಕಾಶ ಇಲ್ಲ. ಅವರ ಈ ಹೇಳಿಕೆಯೇ ಅವರು ಸೆಟ್ಟಾಪ್ ಬಾಕ್ಸ್ ಕೊಡುತ್ತಿರುವುದು ಸತ್ಯ ಎಂದು ಹೇಳುತ್ತಿದೆ. ಕೂಡಲೇ ಬಿಜೆಪಿ ಅಭ್ಯರ್ಥಿ ಪರ ಐಪಿಸಿ 171 ಎ, ಬಿ, ಸಿ, ಡಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. 123 ಜನಪ್ರತಿನಿಧಿ ಕಾಯ್ದೆ ಅಡಿಯಲ್ಲೂ ಕಾನೂನಿನ ಕ್ರಮ ಕೈಗೊಳ್ಳಬೇಕು. ಇನ್ನು ಚುನಾವಣಾ ಆಯೋಗ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ತಕ್ಷಣವೇ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.
ನನ್ನ ವಿರುದ್ಧ ಕೇವಲ ಸದಾನಂದ ಗೌಡರು, ಅಶ್ವಥ್ ನಾರಾಯಣ, ಆರ್. ಅಶೋಕ್, ಸಿ.ಟಿ ರವಿ, ಎಸ್. ಸೋಮಶೇಖರ್ ಇವರೇ ಯಾಕೆ ಟೀಕೆ ಮಾಡುತ್ತಿದ್ದಾರೆ. ಕೇವಲ ಒಂದು ಸಮುದಾಯದ ನಾಯಕರೇ ಯಾಕೆ ಟೀಕೆ ಮಾಡುತ್ತಿದ್ದಾರೆ? ಯಡಿಯೂರಪ್ಪನವರು ಯಾಕೆ ಮಾತನಾಡುತ್ತಿಲ್ಲ. ನಾನು ಯಾವ ವಿಚಾರದಲ್ಲಿ ಜಾತಿ ರಾಜಕಾರಣ ಮಾಡುತ್ತಿದ್ದೇನೆ? ನನ್ನ ವಿರುದ್ಧ ಒಂದು ಸಮುದಾಯದ ನಾಯಕರೇ ಯಾಕೆ ಟೀಕೆ ಮಾಡುತ್ತಿದ್ದಾರೆ? ಇದು ಜಾತಿ ರಾಜಕಾರಣ ಅಲ್ಲವೇ? ನನಗೆ ಕಾಂಗ್ರೆಸ್ಸೇ ಜಾತಿ. ರೈತ ಮುಖಂಡ ಮಾರುತಿ ಮಾಲ್ಪಡೆ ಅವರ ಸಾವಿಗೆ ನಾವು ಕಾರಣವಾಗಿದ್ದರೆ, ನಮ್ಮ ವಿರುದ್ಧ ಪ್ರಕರಣ ದಾಖಲಿಸಲು ಹೇಳಿ ಎಂದು ಸವಾಲು ಹಾಕಿದ್ದಾರೆ.