ಬೆಂಗಳೂರು: ಆರು ತಿಂಗಳ ನಂತರ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಹುದ್ದೆಗೆ ನಿಯುಕ್ತಿ ಮಾಡಲಾಗಿದೆ. ಇವರು ಸೇರಿದಂತೆ ಏಳು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆರು ತಿಂಗಳ ಹಿಂದೆ ಐಪಿಎಸ್ ಅಧಿಕಾರಿ ಡಿ.ರೂಪ ಮತ್ತು ರೋಹಿಣಿ ಸಿಂಧೂರಿ ನಡುವೆ ಕೆಲ ವಾದ - ಪ್ರತಿವಾದಗಳು ನಡೆದಿದ್ದವು. ಅವರೊಂದಿಗಿನ ವಿವಾದದ ಬಳಿಕ ಯಾವುದೇ ಹುದ್ದೆ ತೋರಿಸದೇ ವರ್ಗಾವಣೆ ಮಾಡಿದ್ದ ರೋಹಿಣಿ ಸಿಂಧೂರಿ ಅವರಿಗೆ ಈಗ ಕಡೆಗೂ ಹುದ್ದೆ ನೀಡಲಾಗಿದೆ.
ಡಿ. ರೂಪಾ ಮತ್ತು ರೋಹಿಣಿ ಸಿಂಧೂರಿ ಅವರ ನಡುವಿನ ಸಂಘರ್ಷ ತಾರಕ್ಕೇರಿದ ಪರಿಣಾಮ ಕಳೆದ ಫೆಬ್ರವರಿ 21ರಂದು ಇಬ್ಬರೂ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಆದರೆ, ಅವರಿಗೆ ಯಾವುದೇ ಹುದ್ದೆ ತೋರಿಸಿರಲಿಲ್ಲ. ಸದ್ಯ ರೋಹಿಣಿ ಸಿಂಧೂರಿ ಅವರಿಗೆ ಕರ್ನಾಟಕ ಗೆಜೆಟಿಯರ್ ಇಲಾಖೆಯ ಮುಖ್ಯ ಸಂಪಾದಕ ಹುದ್ದೆ ನೀಡಲಾಗಿದೆ.
ಇನ್ನು, ಹುದ್ದೆ ನಿರೀಕ್ಷೆಯಲ್ಲಿದ್ದ ಪ್ರದೀಪ್ ಪಿ. ಅವರನ್ನು ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕ (ಸೋಷಿಯಲ್ ಆಡಿಟ್) ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಲತಾ ಕುಮಾರಿ ಅವರಿಗೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಯಾಗಿ, ಸಿ.ಎನ್.ಶ್ರೀಧರ ಅವರನ್ನು ಜವಳಿ ಇಲಾಖೆ ಆಯುಕ್ತ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಸಂಗಪ್ಪ ಅವರನ್ನು ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿ.ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ನಿಯೋಜಿಸಲಾಗಿದೆ.
ಕೆಪಿಎಸ್ಸಿ ಕಾರ್ಯದರ್ಶಿಯಾಗಿದ್ದ ಸುರಲ್ಕರ್ ವಿಕಾಸ್ ಕಿಶೋರ್ ಅವರನ್ನು ಬಿಬಿಎಂಪಿಯ ರಾಜರಾಜೇಶ್ವರಿ ನಗರ ವಲಯ ಆಯುಕ್ತರಾಗಿ, ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾಗಿದ್ದ ಶ್ರೀರೂಪಾ ಅವರನ್ನು ಕರ್ನಾಟಕ ರಾಜ್ಯ ಮಿನರಲ್ ಕಾರ್ಪೊರೇಷನ್ ಲಿ.ನ ಕಾರ್ಯಕಾರಿ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ರೂಪಾ, ಸಿಂಧೂರಿ ಪ್ರಕರಣದ ಹಿನ್ನೆಲೆ: ಡಿ. ರೂಪಾ ಮೌದ್ಗಿಲ್ ಅವರು 2023ರ ಫೆ.18 ಮತ್ತು 19ರಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಸಿಂಧೂರಿ ವಿರುದ್ಧ ಕೆಲ ಪೋಸ್ಟ್ಗಳನ್ನು ಮಾಡಿದ್ದರು. ಇದಾದ ನಂತರ ಇಬ್ಬರು ಅಧಿಕಾರಿಗಳು ಮಾಧ್ಯಮದ ಮುಂದೆ ಕೆಲ ಹೇಳಿಕೆಗಳನ್ನು ನೀಡಿದ್ದರು. ಈ ಕಾರಣಕ್ಕೆ ಸರ್ಕಾರ ಕ್ರಮ ತೆಗೆದುಕೊಂಡಿತ್ತು. ಅಲ್ಲದೇ ಡಿ.ರೂಪಾ ಮೇಲೆ ಸಿಂಧೂರಿ ಫೇಸ್ಬುಕ್ ಪೋಸ್ಟ್ ಮತ್ತು ಮಾಧ್ಯಮದ ಹೇಳಿಕೆ ವಿಚಾರವಾಗಿ ಮಾನಹಾನಿ ಪ್ರಕರಣ ದಾಖಲು ಮಾಡಿದ್ದರು. ಪ್ರಸ್ತುತ ಮಾನಹಾನಿ ಪ್ರಕರಣ ಕೋರ್ಟ್ನಲ್ಲಿದೆ.
ಇದನ್ನೂ ಓದಿ: ವೈಯಕ್ತಿಕ ಖಾತೆಗಳ ನಿರ್ಬಂಧ: ಹೈಕೋರ್ಟ್ನಲ್ಲಿ 25 ಲಕ್ಷ ರೂ. ಠೇವಣಿ ಇಟ್ಟ ಎಕ್ಸ್ ಕಾರ್ಪ್