ಬೆಂಗಳೂರು: ನಾಡಿನ ಖ್ಯಾತ ಆಯುರ್ವೇದ ತಜ್ಞರಾದ ಡಾ. ಗಿರಿಧರ ಕಜೆ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರಿಗೆ ಪತ್ರ ಬರೆದಿದ್ದು, ಮಹಾಮಾರಿ ಕೊರೊನಾವನ್ನು ಆಯುರ್ವೇದಿಕ್ ಔಷಧದಿಂದ ಗುಣಪಡಿಸಬಹುದಾಗಿದ್ದು, ನಾನು ಸಂಶೋಧಿಸಿರುವ ಔಷಧದಿಂದ ಕೊರೊನಾ ಗುಣಪಡಿಸಬಲ್ಲೆ ಎಂದು ದಾಖಲೆಗಳ ಸಮೇತ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ 23 ವರ್ಷಗಳಿಂದ ಆಯುರ್ವೇದ ವೈದ್ಯನಾಗಿ ಸೇವೆಸಲ್ಲಿಸುತ್ತಿದ್ದು, 2 ಲಕ್ಷಕ್ಕೂ ಅಧಿಕ ರೋಗಿಗಳನ್ನು ಗುಣಪಡಿಸಿದ ಅನುಭವ ಹೊಂದಿರುವುದಾಗಿ ತಿಳಿಸಿರುವ ಅವರು, ಡೆಂಘಿ, ಚಿಕೂನ್ ಗುನ್ಯಾ, ಹೆಚ್1 ಎನ್ 1 ಸೇರಿದಂತೆ ಅನೇಕ ವೈರಲ್ ರೋಗಗಳಿಗೆ ಆಯುರ್ವೇದ ಔಷಧ ಮಾತ್ರದಿಂದ ಸಹಸ್ರಾರು ರೋಗಿಗಳನ್ನು ಗುಣಪಡಿಸಿರುವುದನ್ನು ಉಲ್ಲೇಖಿಸಿದ್ದಾರೆ.
ಸಾಂಕ್ರಾಮಿಕ ರೋಗಗಳ ನಿರ್ವಹಣೆಯ ಕುರಿತಾಗಿ ಆಯುರ್ವೇದದಲ್ಲಿ ಹಲವಾರು ಉಲ್ಲೇಖಗಳಿದ್ದು, ಆಯುರ್ವೇದ ಪದ್ಧತಿಯ ಆಧಾರದಲ್ಲಿ ನಾನು ಸಂಶೋಧಿಸಿರುವ 'ಭೌಮ್ಯ' ಸಾಥ್ಮ್ಯ' ಎಂಬ ಔಷಧಗಳು 'ಕೋವಿಡ್ 19' ಅನ್ನು ಗುಣಪಡಿಸಲು ಶಕ್ತವಾಗಿವೆ. ಇವು ಆ್ಯಂಟಿ ವೈರಲ್ ಗುಣಮಾತ್ರವನ್ನು ಹೊಂದಿರದೇ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದ್ದಾರೆ.
ಈ ಔಷಧದ ಬಳಕೆಯಿಂದ ಈ ಕೆಳಗಿನ ಪ್ರಯೋಜನಗಳನ್ನು ಕಾಣಬಹುದು ಎಂದು ಅವರು ವಿವರಿಸಿದ್ದಾರೆ.
* ಕೋವಿಡ್ 19 ರೋಗಿಗಳನ್ನು ಗುಣಮುಖವಾಗಿಸಬಲ್ಲದು.
* ರೋಗಿಗಳ ಔಷಧೋಪಚಾರದ ಸಮಯವನ್ನು ಕಡಿತಗೊಳಿಸಬಹುದು.
* ರೋಗಿಗಳು ತೀವ್ರ ಅಸ್ವಸ್ಥರಾಗುವುದನ್ನು ತಡೆಯುತ್ತದೆ.
* ರೋಗಿಗಳ ಮರಣ ಪ್ರಮಾಣವನ್ನು ತಗ್ಗಿಸುತ್ತದೆ.
* ರೋಗಿಗಳ ಮೇಲೆ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ.
* ಆರೋಗ್ಯ ಸುಧಾರಣೆಗೆ ಸಹಕರಿಸುತ್ತದೆ.
ಭಾರತದಲ್ಲಿ ಇರುವ 5,000ಕ್ಕೂ ಹೆಚ್ಚು ಪಾಸಿಟಿವ್ ರೋಗಿಗಳಿಗೆ ಹಾಗೂ ಕ್ಲಿನಿಕಲ್ ಅಧ್ಯಯನಕ್ಕೆ ಈ ಔಷಧವನ್ನು ಉಚಿತವಾಗಿ ಕೊಡಲು ಸಿದ್ಧನಿದ್ದೇನೆ. ಅಂತೆಯೇ ನಾನು ಸಂಶೋಧಿಸಿರುವ 'ಭೌಮ್ಯ' ಹಾಗೂ 'ಸಾಥ್ಮ್ಯ' ಮಾತ್ರೆಗಳ ಫಾರ್ಮುಲಾ ಹಾಗೂ ಸ್ವಾಮ್ಯವನ್ನು ಕೊವಿಡ್ 19 ವಿರುದ್ಧ ಹೋರಾಡಲು ಹಾಗೂ ಜೀವಜಗತ್ತಿನ ಒಳಿತಿಗಾಗಿ ಕೇಂದ್ರ ಸರ್ಕಾರಕ್ಕೆ ನೀಡಲು ಬದ್ಧನಾಗಿದ್ದೇನೆ ಎಂದು ತಮ್ಮ ಪತ್ರದಲ್ಲಿ ಡಾ. ಗಿರಿಧರ್ ಕಜೆ ಉಲ್ಲೇಖಿಸಿದ್ದಾರೆ.