ಬೆಂಗಳೂರು: ತೆಲಂಗಾಣಕ್ಕೆ ಹೋಗುತ್ತೇನೆ. ಪಾರ್ಟಿ ಕೆಲಸ ಏನಿದೆಯೋ ಅದನ್ನು ಮಾಡುತ್ತೇನೆ ಅಷ್ಟೇ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹಿನ್ನೆಲೆ ತೆಲಂಗಾಣದಲ್ಲಿ ಕೈ ಅಭ್ಯರ್ಥಿಗಳಿಗೆ ಆಪರೇಷನ್ ಯತ್ನ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಹೋಗುವುದಿಲ್ಲ ಅಂತ ಹೇಳುತ್ತಿಲ್ಲ. ತೆಲಂಗಾಣದ ರಾಜಧಾನಿ ಹೈದರಾಬಾದ್ಗೆ ಹೋಗುತ್ತೇನೆ. ನಮ್ಮ ಕ್ಯಾಂಡಿಡೇಟ್ ಎಲ್ಲಾ ತಿಳಿಸಿದ್ದಾರೆ. ಯಾರ್ಯಾರು ಸಂಪರ್ಕ ಮಾಡುತ್ತಿದ್ದಾರೆ ಅನ್ನೋದನ್ನೂ ತಿಳಿಸಿದ್ದಾರೆ. ನಾವು ಕೂಡ ಜಾಗೃತಿಯಿಂದ ಇದ್ದೇವೆ ಎಂದು ಹೇಳಿದರು.
ನಾಳೆ ಚುನಾವಣೆ ಫಲಿತಾಂಶ ಇದೆ. ಫಲಿತಾಂಶ ಬರಲಿ ನಂತರ ಅದರ ಬಗ್ಗೆ ಮಾತನಾಡುತ್ತೇನೆ. ನಾನು ಹೋಗುತ್ತಿರುವುದು ಕನಕಪುರಕ್ಕೆ, ಜನಸಂಪರ್ಕ ಸಭೆ ಮಾಡೋದಕ್ಕೆ ಹೋಗುತ್ತಿದ್ದೇನೆ. ನಮ್ಮ ಕ್ಷೇತ್ರದ ಜನರ ಜೊತೆ ಮಾತನಾಡಿಲ್ಲ. ಅಸೆಂಬ್ಲಿ ಶುರುವಾಗುತ್ತಿದೆ, 10 ದಿನ ಬೆಳಗಾವಿಗೆ ಹೋಗಬೇಕು. ಅದಕ್ಕಿಂತ ಮೊದಲು ನಮ್ಮ ಕ್ಷೇತ್ರದ ಜನರ ಬಳಿ ಮಾತನಾಡಿಕೊಂಡು ಬರುತ್ತೇನೆ ಎಂದರು.
ಡಿಸಿಎಂ ಡಿ ಕೆ ಶಿವಕುಮಾರ್ ಅವರು ರಾಮನಗರ ಜಿಲ್ಲೆಯ ಕನಕಪುರ ಟೌನ್ ಅಂಬೇಡ್ಕರ್ ಭವನದಲ್ಲಿ ಇಂದು ಬೆಳಗ್ಗೆ 10.30 ರಿಂದ ಸಂಜೆ 5.00 ಗಂಟೆವರೆಗೆ ಜನಸಂಪರ್ಕ ಸಭೆ ನಡೆಸುತ್ತಿದ್ದಾರೆ. ಕನಕಪುರ ತಾಲ್ಲೂಕಿನ ಜನರು ತಮ್ಮ ಸಮಸ್ಯೆಗಳ ಬಗ್ಗೆ ಡಿಸಿಎಂ ಅವರಿಗೆ ಅಹವಾಲು ಸಲ್ಲಿಸಬಹುದು. ಅವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವುದು ಈ ಸಭೆಯ ಉದ್ದೇಶವಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, ಜನರ ಸಮಸ್ಯೆಗಳ ಪರಿಹಾರಕ್ಕೆ ನೆರವಾಗಲಿದ್ದಾರೆ.
ಇದನ್ನೂ ಓದಿ: ಪಕ್ಷ ಹೇಳಿದ ಕೆಲಸ ಮಾಡಬೇಕಾಗುತ್ತದೆ, ನಮ್ಮ ಮುಂದೆ ಬೇರೆ ಆಯ್ಕೆಗಳಿಲ್ಲ: ಡಿಸಿಎಂ ಡಿಕೆಶಿ