ಬೆಂಗಳೂರು : ನಾನು ದ್ವೇಷದ ರಾಜಕಾರಣ ಮಾಡೋದಿಲ್ಲ. ಅಪರಾಧ ಮಾಡಿದ್ರೆ ಕ್ರಮ ತೆಗೆದುಕೊಳ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಪ್ರತಿಭಟನೆ ವಿಚಾರವಾಗಿ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ದ್ವೇಷದ ರಾಜಕಾರಣ ಮಾಡೋದಿಲ್ಲ. ಅಪರಾಧ ಮಾಡಿದ್ರೆ ಕ್ರಮ ತೆಗೆದುಕೊಳ್ತೇವೆ. ನಿರಪರಾಧಿಗಳ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಅಪರಾಧ ಮಾಡಿದ್ರೆ ಕ್ರಮ ತೆಗೆದುಕೊಳ್ಳಬಾರದಾ ಹೇಳಿ?. ನೀವು ಹೋಗಿ ಅವ್ರನ್ನ ಕೇಳಿದ್ದೀರಾ?. ರಾಜಕೀಯಕ್ಕಾಗಿ ಪ್ರತಿಭಟನೆ ಮಾಡಬಾರದು. ಬಂಧಿತರ ವಿರುದ್ಧ ಎಷ್ಟು ಕೇಸ್ ಇವೆ ಗೊತ್ತಾ?. ಅಂತಹವರನ್ನು ಬಿಡಬೇಕಾ ಎಂದು ಪ್ರಶ್ನಿಸಿದರು.
ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಬಾರದು ಎಂದು ಪ್ರತಿಭಟನೆ ಮಾಡುತ್ತಿದ್ದಾರಾ?. ನಿಮ್ಮ ಪ್ರತಿಭಟನೆಯ ಉದ್ದೇಶ ಏನು?. ಅಪರಾಧ ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಯಾರು ನಿರಪರಾಧಿಗಳು ಇದ್ದಾರೋ ಅಂತವರ ವಿರುದ್ಧ ಕ್ರಮ ತೆಗದುಕೊಳ್ಳುವುದಿಲ್ಲ ಎಂದು ಸಿಎಂ ಹೇಳಿದರು.
ಅನುಮಾನಗಳಿಗೆ ಉತ್ತರ ಇಲ್ಲ: ಕರ್ನಾಟಕದಲ್ಲೂ ಗೋದ್ರಾ ಘಟನೆ ಆಗಬಹುದು ಎಂಬ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ಅನುಮಾನಗಳಿಗೆ ಉತ್ತರ ಕೊಡಲಾಗುವುದಿಲ್ಲ. ಅನುಮಾನಗಳಿಗೆ ಉತ್ತರ ಕೊಟ್ಟು ಪ್ರಯೋಜನ ಇಲ್ಲ. ಅನುಮಾನ, ಊಹೆಗಳಿಗೆ ಉತ್ತರ ಇಲ್ಲ ಎಂದು ತಿಳಿಸಿದರು. ದೆಹಲಿ ಪ್ರವಾಸ ವಿಚಾರವಾಗಿ ಪ್ರತಿಕ್ರಿಯಿಸುತ್ತ, ನಾನು, ಡಿ.ಕೆ ಶಿವಕುಮಾರ್ ಇಬ್ಬರೂ ದೆಹಲಿಗೆ ಹೋಗುತ್ತಿದ್ದೇವೆ. ಲೋಕಸಭೆ ಎಲೆಕ್ಷನ್ ಬಗ್ಗೆ ಚರ್ಚೆ ಆಗುತ್ತೆ. ನಿಗಮ ಮಂಡಳಿ ನೇಮಕದ ಬಗ್ಗೆನೂ ಚರ್ಚೆ ಮಾಡ್ತೇವೆ ಎಂದರು.
ಗೋದ್ರಾ ಮಾದರಿ ದುರಂತ ಆಗಬಹುದು : ಕರ್ನಾಟಕದಲ್ಲಿ ಗೋದ್ರಾ ದುರಂತದ ರೀತಿ ಮತ್ತೊಂದು ಘಟನೆ ಆಗಬಹುದು ಎಂದು ಕಾಂಗ್ರೆಸ್ ಎಂಎಲ್ಸಿ ಬಿ ಕೆ ಹರಿಪ್ರಸಾದ್ ಹೇಳಿದ್ದರು. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ್ದ ಅವರು, ನಮಗೆ ಮಾಹಿತಿ ಸಿಗ್ತಾ ಇದೆ. ಮಾಹಿತಿ ಇದ್ದೇ ಹೇಳ್ತಾ ಇದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಪಕ್ಷದ ನಿಲುವಿಗೂ ನನ್ನ ಹೇಳಿಕೆಗೂ ಸಂಬಂಧ ಇಲ್ಲ. ಕೆಲವು ರಾಜ್ಯಗಳಿಂದ ನನಗೆ ಮಾಹಿತಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ಭದ್ರತೆ ನೀಡಬೇಕು. ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಧಾರ್ಮಿಕ ಕಾರ್ಯಕ್ರಮ ಅಲ್ಲ. ಒಂದು ರಾಜಕೀಯ ಕಾರ್ಯಕ್ರಮದಂತಾಗಿದೆ. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ನಾವೆಲ್ಲರೂ ಹೋಗುತ್ತಿದ್ದೆವು ಎಂದು ಹೇಳಿದರು.
ಇದನ್ನೂ ಓದಿ : ರಾಜ್ಯದಲ್ಲಿ ಗೋಧ್ರಾ ದುರಂತದ ರೀತಿ ಮತ್ತೊಂದು ಘಟನೆ ನಡೆಯಬಹುದು: ಬಿ.ಕೆ.ಹರಿಪ್ರಸಾದ್