ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರೀ ಸಂಚಲನ ಮೂಡಿಸಿದ್ದ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿ ಸಿಬಿಐ ತನಿಖೆ ಚುರುಕುಗೊಳಿಸಿದೆ. ಇನ್ನೊಂದೆಡೆ ಇದೇ ಮೊದಲ ಬಾರಿಗೆ ಫೋನ್ ಕದ್ದಾಲಿಕೆ ಕುರಿತಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಕ್ರಿಯಿಸಿದ್ದಾರೆ.
ಇದುವರೆಗೆ ಸಿಬಿಐ ನನಗೆ ಯಾವುದೇ ನೋಟಿಸ್ ನೀಡಿಲ್ಲ. ಒಂದು ವೇಳೆ ನೋಟಿಸ್ ನೀಡಿದರೆ ಖಂಡಿತವಾಗಿ ಸಿಬಿಐ ತನಿಖಾಧಿಕಾರಿ ಎದುರು ಹಾಜರಾಗುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರ ಕಾಲಾವಧಿಯಲ್ಲಿ ಹಿರಿಯ ಅಧಿಕಾರಿಯಾಗಿದ್ದ ಭಾಸ್ಕರ್ ರಾವ್ ಅವರು ಕಮಿಷನರ್ ಆಗಲು ಲಾಬಿ ಮಾಡಿದ್ದರು ಎನ್ನಲಾಗಿದೆ. ಇದೇ ಕರೆಯನ್ನು ಸಿಸಿಬಿ ತಾಂತ್ರಿಕ ವಿಭಾಗದ ಇನ್ಸ್ಪೆಕ್ಟರ್ ಮಿರ್ಜಾ ಅವರು ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಕದ್ದಾಲಿಕೆ ಮಾಡಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ ಗಣ್ಯಾತಿಗಣ್ಯರ ಫೋನ್ ಟ್ಯಾಪಿಂಗ್ ಮಾಡಿದ ಆರೋಪ ಹಿನ್ನೆಲೆ ಬಿಜೆಪಿ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆ ನೀಡಿದೆ.