ಬೆಂಗಳೂರು : ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದರು.
ಯಡಿಯೂರು ಕೆರೆ ಬಳಿಯ ಸಾವಯವ ಗೊಬ್ಬರ ಉತ್ಪಾದನಾ ಘಟಕದ ಉದ್ಘಾಟನೆ ಮಾಡಿ ನಂತರ ಮಾತನಾಡಿದ ಸಿಎಂ, ಭೂ ಸುಧಾರಣೆ ಕಾಯ್ದೆಯನ್ನು ಇಡೀ ರಾಜ್ಯದ ಜನ ಸ್ವಾಗತಿಸಿದ್ದಾರೆ. ದೇಶದಲ್ಲಿ ಯಾವ ರಾಜ್ಯದಲ್ಲೂ ಈ ರೀತಿಯ ನಿರ್ಬಂಧಗಳಿಲ್ಲ. ಇದರಿಂದ ಎಷ್ಟು ಉಪಯೋಗ ಆಗಲಿದೆ ಎಂದು ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರಿಗೂ ಅರ್ಥವಾಗುತ್ತೆ. ನಾನು ಕೂಡ ಅವರ ಜೊತೆ ಮಾತನಾಡುತ್ತೇನೆ. ಇದರ ಬಗ್ಗೆ ಅವರಿಗೆ ಮನವರಿಕೆಮಾಡುತ್ತೇನೆ ಎಂದರು.
ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಯಾರದೂ ವಿರೋಧ ಇಲ್ಲ. ಇಂತಹ ಒಳ್ಳೆಯ ಕೆಲಸಕ್ಕೆ ಎಲ್ಲರೂ ಸ್ವಾಗತ ಮಾಡುತ್ತಿರುವ ಸಮಯದಲ್ಲಿ ಅವರು ವಿರೋಧ ಮಾಡುತ್ತಿರುವುದು ಯಾಕಂತೆ ಗೊತ್ತಿಲ್ಲ. ಇದೊಂದು ಅಪರೂಪದ ಕಾರ್ಯಕ್ರಮ, ಬಹಳ ಶ್ರಮದಿಂದ ಮಾಡಿದ್ದೇವೆ. ಇದರ ಉಪಯೋಗ ರೈತರಿಗೂ ಸಹ ಆಗಲಿದೆ. ರೈತರ ಭೂಮಿಗೆ ಒಳ್ಳೆಯ ಬೆಲೆ ಸಿಗುತ್ತದೆ. ಯಾರು ಬೇಕಾದರು ಭೂಮಿ ಕೊಳ್ಳುವುದಕ್ಕೆ ಸಹಾಯವಾಗುತ್ತೆ ಎಂದರು.
ಇದರಿಂದ ಹೆಚ್ಚು ಕೈಗಾರಿಕೆಗಳು ಬರುವುದಕ್ಕೆ ಸಹಾಯವಾಗುತ್ತದೆ. ಅಲ್ಲದೆ ಕೃಷಿ ಬೆಳವಣಿಗೆ ಕೂಡ ಆಗುತ್ತೆ, ಇದೆಲ್ಲವನ್ನೂ ಯೋಚನೆ ಮಾಡಿ ಕ್ಯಾಬಿನೆಟ್ನಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ. ಶೀಘ್ರದಲ್ಲೇ ಸುಗ್ರಿವಾಜ್ಞೆ ಹೊರಡಿಸುತ್ತೇವೆ, ದಯವಿಟ್ಟು ಸಿದ್ದರಾಮಯ್ಯನವರು ಕೂಡ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದರು.