ಬೆಂಗಳೂರು : ನಾನು ಆರೋಗ್ಯವಾಗಿ, ಚೆನ್ನಾಗಿದ್ದೇನೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇನ್ನೂ ಎರಡು ದಿನ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆದು ನಂತರ ಮನೆಗೆ ವಾಪಸ್ ಆಗುತ್ತೇನೆ. ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬರುವುದು ಬೇಡ. ಮನೆಗೆ ಬಂದ ಬಳಿಕ ಅಲ್ಲಿಯೇ ಬಂದು ಕುಶಲೋಪರಿ ವಿಚಾರಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಈ ಹಿಂದೆ ನಾನು ಸ್ಟಂಟ್ ಅಳವಡಿಸಿಕೊಂಡಿದ್ದೆ. ಬಹಳ ಕ್ರಿಯಾಶೀಲನಾಗಿ ಓಡಾಡಿದ್ದರೂ ಏನೂ ಆಗಿರಲಿಲ್ಲ. ಆದರೆ ಇಷ್ಟು ವರ್ಷಗಳ ನಂತರ ಒಂದು ರಕ್ತನಾಳ ಬ್ಲಾಕ್ ಆಗಿತ್ತು. ಆಂಜಿಯೋಗ್ರಾಮ್ ಮಾಡಿ ಚಿಕಿತ್ಸೆ ನೀಡಿದ್ದಾರೆ. ನಾನು ಈಗಲೇ ಮನೆಗೆ ತೆರಳಬಹುದು. ಬರುವ ಜನರ ಸಂಖ್ಯೆ ಜಾಸ್ತಿಯಾಗುತ್ತದೆ. ಹೀಗಾಗಿ ಎರಡು ದಿನ ಇಲ್ಲೇ ಇರುತ್ತೇನೆ. ಐಯಾಮ್ ಟೋಟಲಿ ಫಿಟ್ ಎಂದಿದ್ದಾರೆ.
ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಗಣ್ಯರು :
ಇಂದು ಗೋಕಾಕ್ ನೂತನ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಹಿರಿಯ ಮುಖಂಡ ಕೆ.ಸಿ.ಕೊಂಡಯ್ಯ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್, ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಅವರು ಸಹ ಸಿದ್ದರಾಮಯ್ಯ ಅವರಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.