ಬೆಂಗಳೂರು: ಕರ್ನಾಟಕ ದಲಿತ ಉದ್ದಿಮೆದಾರರ ಸಂಘ ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ದಲಿತೋದ್ಯಮಕ್ಕೆ ಆರ್ಥಿಕ ಸವಲತ್ತುಗಳನ್ನು ನೀಡಿದ್ದಕ್ಕೆ ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದು, ಬದುಕಿನ ಕೊನೆ ಉಸಿರಿರುವವರೆಗೂ ನಾನು ನಿಮಗೆ ಋಣಿ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಮಾಜದ ಕೊನೆ ವ್ಯಕ್ತಿಗೂ ಮೂಲಭೂತ ಸೌಕರ್ಯಗಳನ್ನು ನೀಡುವುದಕ್ಕೆ ಎಲ್ಲಾ ಸರ್ಕಾರಗಳು ಕೆಲಸ ಮಾಡಿವೆ. ನಮ್ಮ ಸರ್ಕಾರ ದಲಿತರಿಗೆ ಶಿಕ್ಷಣ, ಉದ್ಯಮ ಹಾಗೂ ಇನ್ನಿತರೆ ಕಾರ್ಯಕ್ರಮ ರೂಪಿಸಿದೆ. ಕೈಗಾರಿಕಾ ನೀತಿಯಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಕ್ಕೂ ಹಲವಾರು ರಿಯಾಯಿತಿ ಘೋಷಣೆ ಮಾಡಲಾಗಿದೆ. ಬದುಕಿನ ಕೊನೆ ಉಸಿರಿರುವವರೆಗೂ ನಾನು ನಿಮಗೆ ಋಣಿ ಆಗಿರುತ್ತೇನೆ ಎಂದರು.
ಬಳಿಕ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಕೋವಿಡ್ ಸಂದರ್ಭದಲ್ಲಿ ಬೇರೆ ಯಾವ ರಾಜ್ಯದವರು ನೀಡದ ಸವಲತ್ತನ್ನ ಸಿಎಂ ನಮಗೆ ನೀಡಿದ್ದಾರೆ. ನಮ್ಮ ಜನಾಂಗದ ಬಡವರಿಗೆ ಸಾಲ ಯಾರು ಕೊಡಲ್ಲ. ಇರುವ ಯೋಜನೆಗಳಲ್ಲಿ ಉದ್ಧಾರ ಮಾಡುವುದಕ್ಕೆ ಆಗುವುದಿಲ್ಲ. ಸರ್ಕಾರವೇ ಸಾಲ ಕೊಡಬೇಕು ಎಂದು ಮನವಿ ಮಾಡಿದ್ದೆ. ಹೀಗಾಗಿ 1,42,000 ಫಲಾನುಭವಿಗಳಿಗೆ ಸಾಲ ನೀಡಲಾಗಿದೆ. ಈ ವರ್ಷ 4,835 ಎಕರೆ ಒಂದೇ ವರ್ಷದಲ್ಲಿ ದಲಿತರಿಗೆ ಕೊಡಿಸಲಾಗಿದೆ. ಇದರ ಜೊತೆ ದಲಿತರ ಭೂಮಿಗೆ ನೀರಾವರಿ ಸೌಲಭ್ಯ ಕೂಡ ಕಲ್ಪಿಸಲಾಗಿದೆ. ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಹಾಸ್ಟೆಲ್, ಶಾಲಾ ನಿರ್ಮಾಣ ಸೇರಿದಂತೆ ₹2,400 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಏನು ಮಾಡುವುದಕ್ಕೆ ಸಾಧ್ಯ ಅದು ನಾವು ಮಾಡುತ್ತೇವೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿ ಯಾವ ಬಾಕಿ ಹಣ ದಲಿತರಿಗೆ ನೀಡಬೇಕು ಅದನ್ನ ಕೂಡಲೇ ನೀಡಿ ಎಂದಿದ್ದರು. ಅದರಂತೆ ₹ 147 ಕೋಟಿ ನೀಡಲಾಗಿದೆ. ಎಸ್ಸಿ, ಎಸ್ಟಿ ವರ್ಗದ ಇನ್ನಷ್ಟು ಜನ ಉದ್ದಿಮೆದಾರರಾಗಬೇಕು. ಸಮಾಜದಲ್ಲಿ ನೀವು ಮಾದರಿ ಆಗಬೇಕು ಎಂದು ಹೇಳಿದರು.
ಕೆಡಿಇಎ ಕಾರ್ಯಾಧ್ಯಕ್ಷ ಸಿಜಿ ಶ್ರೀನಿವಾಸ್ ಮಾತನಾಡಿ, ಮಂಡಿಸಿದ ಆಯವ್ಯದಲ್ಲಿ ದಲಿತರಿಗೆ ಪ್ರೋತ್ಸಾಹ ನೀಡಲಾಗಿದೆ. ಎಸ್ಸಿ, ಎಸ್ಟಿ ಶೆಡ್ ಯೋಜನೆಗೆ ಒಟ್ಟು ₹ 250 ಕೋಟಿ ನೀಡಬೇಕಿದೆ. ಜೊತೆಗೆ ಮತ್ತಷ್ಟು ಯೋಜನೆಗಳಲ್ಲಿ ಸುಧಾರಣೆ ತರಬೇಕಿದೆ ಎಂದು ಮನವಿ ಮಾಡಿದರು.