ಬೆಂಗಳೂರು: ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನೇನಹಳ್ಳಿ ಕೆರೆಯಲ್ಲಿ ಇದೇ ತಿಂಗಳ 14ರಂದು ಸೂಟ್ಕೇಸ್ನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮಹಿಳೆ ಮೃತ ದೇಹ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದಾಬಸ್‌ಪೇಟೆ ಪೊಲೀಸರು ತನಿಖೆ ನಡೆಸಿದ್ದಾರೆ. ಆಗ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವಾಸವಿದ್ದ 35 ವರ್ಷದ ಮಹಿಳೆ ಮಂಜುಳ ಮೃತದೇಹ ಎಂದು ತಿಳಿದು ಬಂದಿದೆ.
ಕಳೆದ ಎರಡು ವರ್ಷದ ಹಿಂದೆ ಈಕೆಯನ್ನು ವರಿಸಿದ್ದ ಎರಡನೇ ಪತಿ ಆರೋಪಿ ರಾಮು ಕೊಲೆ ಮಾಡಿದ್ದಾನೆ. ಈ ಪ್ರಕರಣದಲ್ಲಿ ರಾಮು ಜೊತೆಗೆ ಶವ ಸಾಗಣೆಗೆ ಸಹಕರಿಸಿದ್ದ ಬಸವಗೌಡನನ್ನೂ ಸಹ ದಾಬಸ್‌ಪೇಟೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಮೃತ ಮಂಜುಳ ಕಳೆದ 18 ವರ್ಷದ ಹಿಂದೆ ಗಂಗಾವತಿ ಮೂಲದ ವಿರೂಪಾಕ್ಷನೊಂದಿಗೆ ಮದುವೆಯಾಗಿದ್ದರು. ವಿರೂಪಾಕ್ಷ ಮದ್ಯ ವ್ಯಸನಿಯಾಗಿದ್ದ, ಅಲ್ಲದೆ ಜೂಜಿಗೆ ದಾಸನಾಗಿದ್ದರಿಂದ ಇಬ್ಬರ ನಡುವೆ ಆಗಾಗ ಜಗಳವಾಗ್ತಿತ್ತು.
ಎರಡನೇ ಮದುವೆಯಾಗಿದ್ದ ಮಹಿಳೆ: ಮೊದಲ ಪತಿ ವಿರೂಪಾಕ್ಷನ ವರ್ತನೆಗೆ ಬೇಸತ್ತು ಆತನನ್ನು ತೊರೆದಿದ್ದಳು. ಹೀಗಾಗಿ ಪತಿ ವಿರೂಪಾಕ್ಷ ಸಹ ತನ್ನಿಬ್ಬರ ಮಕ್ಕಳನ್ನ ಕರೆದ್ಕೊಂಡು ಗಂಗಾವತಿಗೆ ವಾಪಸ್ ಆಗಿದ್ದ. ಇದರ ನಡುವೆ ಒಂಟಿ ಜೀವನ ನಡೆಸುತ್ತಿದ್ದ ಮೃತ ಮಂಜುಳಾ ಪೀಣ್ಯ ಕೈಗಾರಿಕಾ ಪ್ರದೇಶದ ಗಾರ್ಮೆಂಟ್ಸ್ವೊಂದರಲ್ಲಿ ಕೆಲಸ ಮಾಡ್ತಿದ್ದಳು. ಈ ವೇಳೆ, ಆರೋಪಿ ರಾಮು ಪರಿಚಯವಾಗಿ, ಪರಿಚಯ ಸ್ನೇಹವಾಗಿ ಪ್ರೀತಿಯಾಗಿ ನಂತ್ರ ಗೊರವನಹಳ್ಳಿ ಲಕ್ಷ್ಮಿ ದೇವಾಲಯದಲ್ಲಿ ಮದುವೆಯಾಗಿದ್ರು.
ಸಂಸಾರದಲ್ಲಿ ಏರುಪೇರು: ಕಳೆದ 2 ವರ್ಷಗಳಿಂದ ಜೊತೆಯಲ್ಲಿ ಸಂಸಾರ ನಡೆಸುತ್ತಿದ್ದರೂ, ಇಬ್ಬರ ವೈವಾಹಿಕ ಜೀವನದ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿಯೇ ಇರಲಿಲ್ವಂತೆ. ಇತ್ತೀಚೆಗೆ ಮೃತ ಮಹಿಳೆ ಹಾಗೂ ಆರೋಪಿ ನಡುವೆ ಸಂಸಾರದಲ್ಲಿ ಏರುಪೇರುಗಳಾಗ್ತಿತ್ತಂತೆ. ಕಾರಣ ಮೃತ ಮಂಜುಳ ಅತಿಯಾಗಿ ಫೋನ್‌ನಲ್ಲಿ ಮಾತನಾಡುತ್ತಿದ್ದಳಂತೆ. ಅಲ್ಲದೇ ಮನೆಯಲ್ಲಿ ಸರಿಯಾಗಿ ಅಡುಗೆ ಸಹ ಮಾಡದೇ ಅಸಡ್ಡೆಯಾಗಿ ವರ್ತಿಸುತ್ತಿದ್ಳಂತೆ.
ಆಯುಧದಿಂದ ತಲೆಗೆ ಹೊಡೆದಿದ್ದ ಪತಿ: ಈ ಹಿಂದೆ ಸಾಕಷ್ಟು ಬಾರಿ ಈ ವಿಷಯವಾಗಿ ಜಗಳ ನಡೆದಿತ್ತಂತೆ. ಆದರೆ ಇದೇ ತಿಂಗಳ 11ನೇ ತಾರೀಖಿನ ರಾತ್ರಿ ಸಿನಿಮಾ ನೋಡ್ಕೊಂಡು ಮನೆಗೆ ಬಂದ ಆರೋಪಿ ರಾಮು, ಮೃತ ಮಂಜುಳ ಬಾಗಿಲು ತೆಗೆಯಲು ತಡ ಮಾಡಿದಕ್ಕೆ ಮತ್ತು ಮನೆಯಲ್ಲಿ ಅಡುಗೆ ಸಹ ಮಾಡದೆ ಮಲಗಿದ್ದಳ್ಳಂತೆ. ಇದ್ರಿಂದ ಕೋಪಗೊಂಡಿದ್ದ ರಾಮು ಬಾಗಿಲನ್ನ ಕಾಲಿನಿಂದ ಒದ್ದು, ಉದ್ರಿಕ್ತನಾಗಿ ಅಲ್ಲೆ ಇದ್ದ ಬಲವಾದ ಆಯುಧದಿಂದ ಆಕೆಯ ತಲೆಗೆ ಹೊಡೆದು, ವೇಲಿನಿಂದ ಕುತ್ತಿಗೆ ಬಿಗಿದು ಜೀವ ತೆಗೆದಿದ್ದಾನೆ.
ಕೊಲೆ ಮಾಡಿದ ನಂತ್ರ ಆರೋಪಿ ರಾಮು ತನ್ನ ಸ್ನೇಹಿತ ಹಾವೇರಿ ಮೂಲದ ಬಸವಗೌಡನಿಗೆ ಫೋನ್ ಮಾಡಿ ತುರ್ತಾಗಿ ಬರುವಂತೆ ಕರೆಸಿ ಕೊಂಡಿದ್ದಾನೆ. ಬಂದ ನಂತರ ನಡೆದ ವಿಚಾರವನ್ನೆಲ್ಲಾ ತಿಳಿಸಿ 12ನೇ ತಾರೀಖು ಮಧ್ಯಾಹ್ನ 3 ಗಂಟೆ ಸಮಯಕ್ಕೆ ಲಗ್ಗೇಜ್ ಸೂಟ್ಕೇಸ್ನಲ್ಲಿ ಮಂಜುಳ ಕೈಕಾಲನ್ನ ವೇಲ್ನಿಂದ ಬಿಗಿದು ಮೃತದೇಹವನ್ನ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನೇನಹಳ್ಳಿಯ ಬಂಡೆ ಪಕ್ಕದ ಕೊಳ್ಳಕ್ಕೆ ಎಸೆದಿದ್ದಾರೆ.
ಇದನ್ನೂ ಓದಿ: ವಿಜಯನಗರ ಬಾಲಕನ ಅಪಹರಣ ಪ್ರಕರಣ: ಪೊಲೀಸರ ಕಾರ್ಯಾಚರಣೆಯಿಂದ ಸುಖಾಂತ್ಯ
ಬಳಿಕ ಆರೋಪಿ ರಾಮು ಚೆನ್ನೈಗೆ ಪರಾರಿಯಾಗಿದ್ದಾನೆ. ಬಸವಗೌಡ ಹಾವೇರಿಗೆ ವಾಪಸಾಗಿದ್ದಾನೆ. ಚೆನ್ನೈನಿಂದ ಬಂದ ನಂತರ ಲಗ್ಗೆರೆಯ ಬಾರ್ ಒಂದ್ರಲ್ಲಿ ಕುಳಿತು ಕುಡಿಯುತ್ತಿದ್ದ ವೇಳೆ ಟವರ್ ಲೋಕೆಷನ್ ಆಧಾರಿಸಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಸದ್ಯ ಘಟನೆ ಸಂಬಂಧ ಆರೋಪಿಗಳನ್ನ ಬಂಧಿಸಿರೋ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ, ಬೈಕ್ ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆಸಿದ್ದಾರೆ.