ಬೆಂಗಳೂರು: ಜೈಲಿನಲ್ಲಿರುವ ಕೈದಿಗಳಿಗೆ ದಿನಗೂಲಿ ಏರಿಕೆ ಮಾಡಿದ್ದಾರೆ ಎಂಬ ವಿಷಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮನಬಂದಂತೆ ವ್ಯಂಗ್ಯ ಚಿತ್ರಣ, ಮೀಮ್ ಮಾಡುವುದು, ಬರಹಗಳನ್ನು ಹಾಕಿದ್ದಾರೆ. ಕೈದಿಗಳ ದಿನಗೂಲಿಯನ್ನ 525 ರೂ.ಗಳಿಗೆ ಏರಿಸಿದ್ದು ಬೇರೆ ಉದ್ಯೋಗಗಳಿಗಿಂತ ಜೈಲುವಾಸವೇ ಲಾಭದಾಯಕ ಎಂಬಂತೆ ಹಲವರು ಗೇಲಿ ಮಾಡಿ ಹರಿಬಿಟ್ಟಿರುವುದು ಕಂಡುಬಂದಿದೆ.
ಈ ವಿಷಯದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟೀಕರಣ ನೀಡಿದ್ದು, ರಾಜ್ಯದಲ್ಲಿ ಸುಮಾರು ಹದಿನೈದು ಸಾವಿರ ಕೈದಿಗಳು ಜೈಲುವಾಸ ಅನುಭವಿಸುತ್ತಿದ್ದಾರೆ. ಜೈಲುವಾಸದಲ್ಲಿರುವ ಕೈದಿಗಳಿಗೆ ಕೂಲಿ ಹಣವನ್ನು 200 ರೂ.ಗಳಿಂದ ಸ್ವಲ್ಪ ಹೆಚ್ಚಿಗೆ ಮಾಡುವ ಕುರಿತು ಪ್ರಸ್ತಾವನೆ ಮಾಡಲಾಗಿದೆಯೇ ಹೊರತೂ ಅಂತಹ ಆದೇಶ ಇದುವರೆಗೂ ಹೊರಡಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಇದನ್ನೂ ಓದಿ: ಜೈಲಿನೊಳಗಿನ ಅಕ್ರಮದ ಬಗ್ಗೆ ಮಾಹಿತಿ ನೀಡಿದ್ರೆ ಶಿಕ್ಷೆ ಅವಧಿ ಕಡಿತ : ಕೈದಿಗಳಿಗೆ ಗೃಹ ಸಚಿವರ ಬಿಗ್ ಆಫರ್
ಜೈಲು ಶಿಕ್ಷೆಯಲ್ಲಿರುವ ಹಲವು ಕೈದಿಗಳಿಂದ ಪ್ರತಿದಿನ ಕೆಲಸಕಾರ್ಯಗಳನ್ನು, ದುಡಿಮೆ ಮಾಡಿಸಲಾಗುತ್ತಿದ್ದು, ಪ್ರತಿಯೊಬ್ಬ ಕೈದಿಯೂ ಕೆಲಸ ಮಾಡಬೇಕಾಗುತ್ತದೆ. ವಿವಿಧ ಕೆಲಸಗಳ ಮೂಲಕ ಕೈದಿಗಳ ಖಿನ್ನತೆಯನ್ನು ಹೋಗಲಾಡಿಸಿ ಅವರ ಮನಃಪರಿವರ್ತನೆ ಮಾಡುವುದು ಇದರ ಉದ್ದೇಶ. ಕೈದಿಗಳಿಗೆ ಕೈಮಗ್ಗ, ಕರಕುಶಲ ವಸ್ತುಗಳ ತಯಾರಿಕೆ, ಸೋಪ್, ಮೇಣದಬತ್ತಿ ತಯಾರಿಕೆ ಸೇರಿದಂತೆ ಇಲಾಖೆಗೆ ಸೇರಿದ ಕೃಷಿ ಜಮೀನಿನಲ್ಲಿ ಹಣ್ಣು ತರಕಾರಿಗಳನ್ನು ಬೆಳೆದು ಮಾರಾಟ ಮಾಡಲಾಗುತ್ತದೆ.
ಈ ಮೂಲಕ ಇಲಾಖೆಗೆ ಆದಾಯವೂ ಬರುತ್ತಿದೆ. ಆದರೆ, ಶಿಕ್ಷೆಯಲ್ಲಿರುವ ಕೈದಿಗಳಿಗೆ ಈಗಲೂ ಕೊಡುತ್ತಿರುವುದು ದಿನಕ್ಕೆ 200 ರೂ.ಗಳು. ಅದರಲ್ಲಿ ಊಟದ ಖರ್ಚು 100 ರೂ.ಗಳನ್ನು ಸಹಾ ಕಳೆಯಲಾಗುತ್ತಿದೆ. ಕೈದಿಯಾದ ಮಾತ್ರಕ್ಕೆ ಆತನಿಂದ ಜೀತ ಮಾಡಿಸಿಕೊಳ್ಳುವ ಹಕ್ಕು ಯಾವ ಸರ್ಕಾರಕ್ಕೂ ಇಲ್ಲ.
ಈ ಕಾರಣದಿಂದಾಗಿ ಅವರಿಂದಲೇ ಬರುತ್ತಿರುವ ಲಾಭ ಬಳಸಿ ಅವರಿಗೆ ಸ್ವಲ್ಪ ಕೂಲಿ ಹೆಚ್ಚಿಸುವ ಯೋಚನೆ ಮಾಡಲಾಗಿದೆ ಅಷ್ಟೇ. ಕಾರಾಗೃಹವಾಸಿಗಳಲ್ಲಿ ಶೇ 50ಕ್ಕಿಂತಲೂ ಹೆಚ್ಚು ಅನಕ್ಷರಸ್ಥರೇ ಇದ್ದಾರೆ. ಹಾಗಾಗಿ ನಾನು ಗೃಹಸಚಿವನಾದ ಬಳಿಕ ಅವರಿಗೆಲ್ಲ ಅಕ್ಷರಾಭ್ಯಾಸ ನಡೆಸುವ ಯೋಜನೆಗೆ ಒತ್ತುಕೊಟ್ಟಿದ್ದು, ಈಗಾಗಲೇ ಬಹಳಷ್ಟು ಪ್ರಗತಿ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿಗೆ ಗೃಹ ಸಚಿವ ದಿಢಿರ್ ಭೇಟಿ: ಅತ್ಯಾಧುನಿಕ ಮೊಬೈಲ್ ಜಾಮರ್ ಅಳವಡಿಕೆಗೆ ನಿರ್ಧಾರ ಎಂದ ಜ್ಞಾನೇಂದ್ರ
ಸೆರೆವಾಸ ಮುಗಿಸಿ ಒಬ್ಬ ಪ್ರಜ್ಞಾವಂತ ನಾಗರೀಕನಾಗಿ ಬದುಕಬೇಕಾದ ಒಬ್ಬ ವ್ಯಕ್ತಿ ಬರಿಗೈಯಲ್ಲಿ ಮನೆಗೆ ಹೋದರೆ ಆತನ ಜೀವನ ಕಷ್ಟ. ತನ್ನ ಜೀವನಕ್ಕೆ ಏನೂ ಆಧಾರ, ಆದಾಯ ಇಲ್ಲದೇ ಸಮಾಜದ ದೃಷ್ಟಿಯಲ್ಲಿ ಅಸ್ಪೃಶ್ಯರಂತಾಗುವ ಆತ ಮತ್ತೆ ತನ್ನ ಜೀವನ ನಡೆಸಲು ಕೆಟ್ಟ ದಾರಿಯನ್ನೇ ಆರಿಸಿಕೊಳ್ಳುವ ಸಂಭವ ಇರುತ್ತದೆ.
ಕೈದಿಗಳ ಕೂಲಿ ಏರಿಸಿದರೂ ಜೈಲಿನಿಂದ ಹೊರಬಂದ ನಂತರವೇ ಅವರಿಗೆ ಹಣ ನೀಡಲಾಗುತ್ತದೆ. ತಮ್ಮ ಕುಟುಂಬದ ನಿರ್ವಹಣೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ, ಸ್ವಂತ ಉದ್ಯೋಗಕ್ಕೆ ಇದು ಸಹಕಾರಿಯಾಗಲಿದೆ.
ಈ ಎಲ್ಲ ಮಾನವೀಯತೆಯ ದೃಷ್ಠಿಯಿಂದ ಕೈದಿಗಳಿಂದ ಬರುತ್ತಿರುವ ಆದಾಯದಿಂದಲೇ ಅವರಿಗೆ ಸ್ವಲ್ಪ ಕೂಲಿ ಹೆಚ್ಚಿಸುವ ಯೋಚನೆ ಮಾಡಲಾಗಿದ್ದು ಇದರ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಕೈದಿಗಳ ಕೂಲಿ ಹೆಚ್ಚಿಸುವ ಆದೇಶ ಇನ್ನೂ ಜಾರಿಯಾಗಿಲ್ಲ. ಆದರೆ, ಹೀಗೊಂದು ಸದುದ್ದೇಶದ ಆಲೋಚನೆ ಮಾಡಲಾಗಿದೆಯಷ್ಟೆ.
ಆದರೆ, ಹಲವರು ಊಹಾಪೋಹಗಳನ್ನು ನಂಬಿ ಕೈದಿಗಳ ಸಂಬಳ ಶಿಕ್ಷಕರ ವೃತ್ತಿಗಿಂತಲೂ ಲೇಸು ಎಂದು ಎಲ್ಲೆಡೆ ಸುದ್ದಿ ಹರಡುತ್ತಿರುವುದು ತಿಳಿದು ಬಂದಿದೆ. ಹಾಗಾಗಿ ಈ ಬಗ್ಗೆ ಮೇಲಿನ ಸ್ಪಷ್ಟೀಕರಣ ನೀಡಿರುವುದಾಗಿ ಗೃಹ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.