ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಕ್ರಮಬದ್ಧವಾಗಿ ತನಿಖೆ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಆರ್.ಟಿ ನಗರದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದಂಧೆಯಲ್ಲಿ ತೊಡಗಿದವರು ಎಷ್ಟೇ ಪ್ರಭಾವಿ ವ್ಯಕ್ತಿಯಾಗಿರಲಿ ಅಥವಾ ಯಾವುದೇ ರಂಗದಲ್ಲಿ ಸಾಧನೆ ಮಾಡಿರಲಿ, ಅವರ ವಿಚಾರಣೆ ಮಾಡುವುದು ಖಚಿತವೆಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ನಮ್ಮ ಎಲ್ಲಾ ಕಾರ್ಯಾಚರಣೆ ಮತ್ತು ವಿಚಾರಣೆ ನ್ಯಾಯಾಲಯದ ಪರಿಶೀಲನೆಗೊಳಪಡಲಿದೆ. ಹಾಗಾಗಿ ಕಾನೂನಿನ ಅನ್ವಯವೇ ನಾವು ವಿಚಾರಣೆ ಮಾಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.
ವ್ಯವಸ್ಥಿತವಾಗಿ ಏನೇನು ಸಾಕ್ಷ್ಯಾಧಾರಗಳಿವೆಯೋ ಅದಕ್ಕೆ ಅನುಗುಣವಾಗಿಯೇ ತನಿಖೆ ನಡೆಯುತ್ತಿದೆ. ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದು ಹಲವಾರು ತಜ್ಞರ ಅಭಿಪ್ರಾಯವಾಗಿದೆ. ಹಿಂದಿನ ಪ್ರಕರಣಗಳನ್ನು ವಿಶ್ಲೇಷಣೆ ಮಾಡಿದಾಗ ಹಿಂದೆ ಎಷ್ಟೋ ಜನಕ್ಕೆ ಶಿಕ್ಷೆ ಆಗಬೇಕಿತ್ತು. ಆದರೆ ಆಗಿಲ್ಲ ಎನ್ನುವುದು ತಜ್ಞರ ಹೇಳಿಕೆಯಾಗಿದೆ. ಅದಕ್ಕಾಗಿ ಕಾನೂನುಅನ್ನು ಇನ್ನಷ್ಟು ಬಿಗಿಗೊಳಿಸಲು ಕಾನೂನು ಸಚಿವರ ಜೊತೆ ಚರ್ಚೆ ಮಾಡುತ್ತೇನೆ. ಈಗಾಗಲೇ ರಾಷ್ಟ್ರೀಯ ಕಾನೂನು ಶಾಲೆಯ ಮುಖ್ಯಸ್ಥರ ಜೊತೆ ಮಾತನಾಡಿದ್ದೇನೆ ಎಂದರು.
ಡ್ರಗ್ಸ್ ದಂಧೆ ನಿಯಂತ್ರಣ ಸಂಬಂಧ ಕಾನೂನನ್ನು ಇನ್ನಷ್ಟು ಬಿಗಿಗೊಳಿಸುವ ಸಲಹೆ ಬಂದಿದೆ. ರಾಜ್ಯ ಸರ್ಕಾರಕ್ಕೆ ಕಾನೂನನ್ನು ಸ್ವಂತವಾಗಿ ಕಾರ್ಯರೂಪಕ್ಕೆ ತರುವ ಅಧಿಕಾರ ಇಲ್ಲ. ಆದರೆ ರೂಲ್ಸ್ ಫ್ರೇಮ್ ಮಾಡುವ ಅಧಿಕಾರವಿದೆ. ರೂಲ್ಸ್ಗೆ ಇನ್ನಷ್ಟು ಶಕ್ತಿ ತುಂಬಲು ಬಿಗಿ ಕ್ರಮ ಕೈಗೊಳ್ಳಲು ಅವಕಾಶ ಕೊಡಿ ಎಂದು ಕೇಂದ್ರವನ್ನು ಕೇಳಲಾಗುತ್ತದೆ ಎಂದು ಸಚಿವ ಮೊಮ್ಮಾಯಿ ಮಾಹಿತಿ ನೀಡಿದರು.