ಬೆಂಗಳೂರು: ಕುಮಾರಸ್ವಾಮಿ ಬೇಜವಾಬ್ದಾರಿತನದ ನಡವಳಿಕೆ ತೋರಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ.
ಕುಮಾರಸ್ವಾಮಿಯವರಿಂದ ಮಂಗಳೂರು ವಿಡಿಯೋ ಬಿಡುಗಡೆ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಪೊಲೀಸರು ಗಲಭೆ ಮಾಡುವುದಿಲ್ಲ. ಗಲಭೆ ನಿಯಂತ್ರಿಸುತ್ತಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಇದೇ ಪೊಲೀಸರಿದ್ದರು. ಪೊಲೀಸರನ್ನು ತಪ್ಪಿತಸ್ಥರಾಗಿ ಮಾಡುವುದು ಸರಿಯಲ್ಲ ಎಂದರು.
ಕುಮಾರಸ್ವಾಮಿ ವಿಡಿಯೋ ಸಮರ್ಪಕವಾಗಿಲ್ಲ, ಸರಿಯಿಲ್ಲ. ವಿಡಿಯೋದಲ್ಲಿ ಹಿಂದೆ ಇರುವುದು ಮುಂದೆ, ಮುಂದೆ ಇರುವುದು ಹಿಂದೆ ಹಾಕಿ ತೋರಿಸಿದ್ದಾರೆ. ಜನ ಸೇರಿದಾಗ, ಕಲ್ಲು ಎಸೆದಾಗ ಲಾಠಿ ಚಾರ್ಜ್ ಆಗಿದೆ. ಶಸ್ತ್ರಾಸ್ತ್ರ ಸಂಗ್ರಹಣೆ ಮಾಡಿದ್ದ ಸ್ಥಳಕ್ಕೆ ದಾಳಿ ಮಾಡಲು ಮುಂದಾದಾಗ ಗೋಲಿಬಾರ್ ಆಗಿದೆ. ಈಗ ಕುಮಾರಸ್ವಾಮಿ ಘಟನೆಯನ್ನು ತಿರುಚಿ ಹೇಳಲು ಮುಂದಾಗಿದ್ದಾರೆ. ಶಾಂತವಾಗಿದ್ದ ರಾಜ್ಯವನ್ನು ಕೆಣಕುವ ಕೆಲಸ ಕುಮಾರಸ್ವಾಮಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಅವರು ತಮ್ಮ ವಿಡಿಯೋವನ್ನು ಮ್ಯಾಜಿಸ್ಟ್ರಿಯಲ್ ತನಿಖೆ ಮಾಡುತ್ತಿರುವವರಿಗೆ ಕೊಡಲಿ. ನಾನೂ ಕೂಡಾ ಆ ವಿಡಿಯೋಗಳನ್ನು ಪರಿಶೀಲಿಸಿ ಅಂತ ಡಿಸಿಗೆ ಹೇಳಿದ್ದೇನೆ. ಕುಮಾರಸ್ವಾಮಿ ಅವರು ಈಗ ಜನರಲ್ಲಿ ಗೊಂದಲ ಎಬ್ಬಿಸುತ್ತಿರುವುದು ಸರಿಯಲ್ಲ.
ಕುಮಾರಸ್ವಾಮಿ, ಪೊಲೀಸರೇ ಪ್ರಚೋದನೆ ಕೊಟ್ಟರು ಅಂದಿದ್ದಾರೆ. ಇದು ತಪ್ಪು, ಬೇಜವಾಬ್ದಾರಿಯ ಹೇಳಿಕೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಎಲ್ಲೆಲ್ಲಿ ಗಲಭೆ ಆಯ್ತು, ಏನೇನಾಯ್ತು ಅಂತ ಎಲ್ಲರಿಗೂ ಗೊತ್ತು. ಮತ್ತಷ್ಟು ವಿಡಿಯೋ ಇದೆ ಅಂದಿದ್ದಾರೆ. ಅವುಗಳನ್ನು ಕುಮಾರಸ್ವಾಮಿ ಬಿಡುಗಡೆ ಮಾಡಲಿ. ಒಬ್ಬ ಮಾಜಿ ಮುಖ್ಯಮಂತ್ರಿ ಹೀಗೆ ನಡೆದುಕೊಳ್ಳುವುದು ಸರಿಯಲ್ಲ ಎಂದು ಕಿಡಿಕಾರಿದರು.