ಬೆಂಗಳೂರು: ಕರ್ನಾಟಕ ಬಂದ್ಗೆ ಕರೆ ನೀಡಿರುವ ಕನ್ನಡಪರ ಸಂಘಟನೆಗಳಿಗೆ ಬಂದ್ ಹಿಂಪಡೆಯುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮನವಿ ಮಾಡಿದ್ದಾರೆ.
ಬೆಂಗಳೂರು ನಗರ ಮೀಸಲು ಪಡೆ ವಿಭಾಗದಲ್ಲಿ ನವೀಕೃತ ಪೊಲೀಸ್ ವ್ಯಾಯಾಮ ಶಾಲೆಯನ್ನು ಇಂದು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. ಕನ್ನಡ ವಿರೋಧಿ ನಡೆ ಅನುಸರಿಸುತ್ತಿರುವ ಎಂಇಎಸ್ ಕಿಡಿಗೇಡಿಗಳನ್ನು ಈಗಾಗಲೇ ಬಂಧಿಸಿದ್ದು, ಕಠಿಣ ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದರು.
ಸಾಂಕ್ರಾಮಿಕ ಕೋವಿಡ್ ಕಾರಣದಿಂದ ಈಗಾಗಲೇ ಆರ್ಥಿಕವಾಗಿ ಜರ್ಜರಿತವಾಗಿ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯದ ಜನತೆಗೆ ಇನ್ನಷ್ಟು ಹೊರೆಯನ್ನು ಹೇರಲು ನಾವು ಕಾರಣವಾಗಬಾರದು ಎಂದರು.
ಎಂಇಎಸ್ ಅನ್ನು ಈಗಾಗಲೇ ಬೆಳಗಾವಿ ನಗರದ ಜನತೆಯೇ ತಿರಸ್ಕರಿಸಿದ್ದಾರೆ. ಸರ್ಕಾರವು ರಾಜ್ಯದ ಜಲ, ನೆಲ ಹಾಗು ನುಡಿಯ ರಕ್ಷಣೆಗೆ ಬದ್ಧವಾಗಿದೆ ಎಂದು ಸಚಿವರು ಹೇಳಿದರು.
ಇದೇ ವೇಳೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 95 ಪ್ರತಿಶತ ಫಲಿತಾಂಶ ಪಡೆದ ದಿವ್ಯಾಂಗ ಚೇತನ ಬಾಲಕನಿಗೆ ಪ್ರಶಸ್ತಿ ಪತ್ರ ನೀಡಿ ಸಚಿವರು ಪುರಸ್ಕರಿಸಿದರು. ಈ ವೇಳೆ ಸಂಸದ ಪಿ. ಸಿ ಮೋಹನ್, ಶಾಸಕ ಜಮೀರ್ ಅಹ್ಮದ್ ಖಾನ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಓದಿ: ಸಿಇಒಗಳ ಕಾರ್ಯನಿರ್ವಹಣೆಗೆ ಜಿಲ್ಲಾವಾರು ಶ್ರೇಯಾಂಕ ವ್ಯವಸ್ಥೆ ಜಾರಿ: ಸಿಎಂ