ಬೆಂಗಳೂರು: ಗೃಹ ರಕ್ಷಕ ದಳದ ಸಿಬ್ಬಂದಿಯ ವಿರುದ್ಧ ಆರೋಪ ಕೇಳಿ ಬಂದಾಗ ಪೂರ್ವಭಾವಿ ನೋಟಿಸ್ ನೀಡದೆಯೂ ಅಮಾನತು ಆದೇಶ ಹೊರಡಿಸಬಹುದು ಎಂದು ಹೈಕೋರ್ಟ್ ತಿಳಿಸಿದೆ.
ನಗರದ ಲಗ್ಗೆರೆಯ ಡಿ.ಇ ಕೆಂಪಾಮಣಿ ಎಂಬುವರನ್ನು ನೋಟಿಸ್ ನೀಡದೇ ಅಮಾನತುಗೊಳಿಸಿದ ಆದೇಶ ರದ್ದು ಕೋರಿ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಸ್.ಜಿ ಪಂಡಿತ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ಗೃಹರಕ್ಷಕ ಸಿಬ್ಬಂದಿ ಶಿಸ್ತಿಗೆ ಹೆಸರಾದ ಪಡೆ, ಅಂತಹ ಪಡೆಯ ಸಿಬ್ಬಂದಿಯ ಅಶಿಸ್ತನ್ನು ಸಹಿಸಲಾಗದು. ಜತೆಗೆ ಅಮಾನತು ಎನ್ನುವುದು ಶಿಕ್ಷೆಯಲ್ಲ, ತಾತ್ಕಾಲಿಕ ಕ್ರಮ, ತನಿಖೆ ಎದುರಿಸಬೇಕಾಗುತ್ತದೆ. ಹಾಗಾಗಿ ಡಿಜಿಪಿ ಹೊರಡಿಸಿರುವ ಅಮಾನತು ಆದೇಶ ಸಮಂಜಸವಾಗಿದೆ. ಅದರಲ್ಲಿ ಹಸ್ತಕ್ಷೇಪ ಮಾಡಲಾಗದು ಎಂದು ಪೀಠ ತಿಳಿಸಿದೆ.
ಕರ್ನಾಟಕ ಗೃಹ ರಕ್ಷಕ ಸಿಬ್ಬಂದಿ ನಿಯಮ 1963ರ ಸೆಕ್ಷನ್ 14ಬಿ ಅಡಿ ಗೃಹರಕ್ಷಕ ದಳದ ಕಮಾಂಡೆಂಟ್ ಅಥವಾ ಕಮಾಂಡ್ ಜನರಲ್ ಗೆ ಹೋಮ್ ಗಾರ್ಡ್‌ಗಳನ್ನು ಅಮಾನತುಗೊಳಿಸುವ ಅಧಿಕಾರ ಇದೆ. ಹಾಗಾಗಿ ಅವರು ಆ ಅಧಿಕಾರ ಬಳಸಿಯೇ ಈ ಆದೇಶ ನೀಡಿದ್ದಾರೆ. ಅಮಾನತು ಆದೇಶಕ್ಕೂ ಮುನ್ನ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಜತೆಗೆ, ಅಮಾನತು ಆದೇಶದ ಕುರಿತಂತೆ ತಮ್ಮ ವಾದವನ್ನು ಆಲಿಸಬೇಕು ಎಂದು ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪ್ರತಿವಾದಿ ಗೃಹರಕ್ಷಕ ದಳದ ಡಿಜಿಪಿ ಪರಿಗಣಿಸಬೇಕು ಎಂದು ನಿರ್ದೇಶನ ನೀಡಿ ಅರ್ಜಿ ಇತ್ಯರ್ಥ ಮಾಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತಮ್ಮ ಕಕ್ಷಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎನ್ನುವ ಕಾರಣಕ್ಕೆ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅದಕ್ಕೂ ಮುನ್ನ ಯಾವುದೇ ನೋಟಿಸ್ ನೀಡಿಲ್ಲ, ನೋಟಿಸ್ ನೀಡದೇ ಅಮಾನತುಗೊಳಿಸಿರುವ ಕ್ರಮ ಸಂವಿಧಾನ ಬಾಹಿರ. ಹಾಗಾಗಿ ಅಮಾನತು ಆದೇಶ ರದ್ದುಗೊಳಿಸಬೇಕು ಎಂದು ಕೋರಿದರು.
ಇದನ್ನೂ ಓದಿ :ಚಾರ್ಜ್ಶೀಟ್ನಲ್ಲಿ ಸಾಕ್ಷಿ ತೋರಿಸಿಲ್ಲವೆಂದು ಪ್ರಕರಣ ರದ್ದುಪಡಿಸಲಾಗದು: ಹೈಕೋರ್ಟ್