ಆಯುಧ ಪೂಜೆ ಎಫೆಕ್ಟ್ - ಬೂದುಗುಂಬಳಕಾಯಿ ದರ ಗಗನಕ್ಕೆ; ಹೂವಿನ ದರದಲ್ಲೂ ಭಾರಿ ಏರಿಕೆ - ಗ್ರಾಹಕರಿಗೆ ಬೆಲೆ ಏರಿಕೆಯ ಹೊರೆ
ಗ್ರಾಹಕರು ಕಡ್ಡಾಯವಾಗಿ ಕೆಜಿ ಲೆಕ್ಕದಲ್ಲಿ ತೆಗೆದುಕೊಳ್ಳಿ, ಇಲ್ಲವಾದರೆ ಒಂದು ಚಿಕ್ಕ ಬೂದುಕುಂಬಳಾಯಿಗೆ 150 ರಿಂದ 200 ರೂ. ಕೊಡಿ ಎನ್ನುತ್ತಿದ್ದಾರೆ ವ್ಯಾಪಾರಿಗಳು. ಗ್ರಾಹಕರಿಗೆ ಬೆಲೆ ಏರಿಕೆಯ ಹೊರೆಯಾಗಿ ಪರಿಣಮಿಸಿದೆ.

ಬೆಂಗಳೂರು: ಈ ಬಾರಿಯ ನವರಾತ್ರಿಗೆ ಬೂದುಗುಂಬಳಕಾಯಿಯ ಬೆಲೆ ಹೆಚ್ಚಾಗಿದೆ. ನಾಳೆಯ ಆಯುಧ ಪೂಜೆಯ ಡಿಮ್ಯಾಂಡ್ ಮತ್ತು ನಿರಂತರ ಮಳೆಯ ಕಾರಣದಿಂದ ಎಲ್ಲೆಡೆ ಬೂದುಗುಂಬಳ ಬೆಳೆ ಹಾಳಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿಗೆ 50 ರೂ. ತಲುಪಿದೆ. ಸಗಟು ದರದಲ್ಲಿ ಕೆ.ಜಿ.ಗೆ 30 ರಿಂದ 35 ರೂ. ದರವಿದೆ. ಹೂವಿನ ಬೆಲೆಗಳಲ್ಲಿ ಕೂಡ ಭಾರಿ ಏರಿಕೆಯಾಗಿದೆ.
ಬೆಲೆ ಏರಿಕೆಯಿಂದಾಗಿ ಬೂದುಗುಂಬಳವನ್ನು ವ್ಯಾಪಾರಿಗಳು ಕೆಜಿ ಲೆಕ್ಕದಲ್ಲಿ ಕಡ್ಡಾಯವಾಗಿ ತೆಗೆದುಕೊಳ್ಳಿ. ಇಲ್ಲ ಎಂದರೆ ಒಂದು ಚಿಕ್ಕ ಕಾಯಿಗೆ 150 ರಿಂದ 200 ರೂ ಕೊಡಿ ಎನ್ನುತ್ತಿದ್ದಾರೆ. ಇದರಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಹೊರೆಯಾಗಿ ಪರಿಣಮಿಸಿದೆ.

ಹಬ್ಬದ ಮತ್ತು ಮಳೆಯ ಹಿನ್ನೆಲೆಯಲ್ಲಿ ನಿಂಬೆಹಣ್ಣು, ಹೂವಿನ ಬೆಲೆಗಳು ಕೂಡ ಏರಿಕೆಯಾಗಿವೆ. ಅದರಲ್ಲೂ ಬಹು ಬೇಡಿಕೆಯ ಸೇವಂತಿ, ಚೆಂಡು ಹೂವುಗಳ ಬೆಲೆ ಮತ್ತಷ್ಟು ಹೆಚ್ಚಾಗಿದೆ. ಶನಿವಾರ ಕೆ.ಆರ್. ಮಾರುಕಟ್ಟೆಯಲ್ಲಿ ಕ್ವಾಲಿಟಿ ಮೇಲೆ ಸೇವಂತಿ ಹೂವು ಕೆ.ಜಿ.ಗೆ 200 ರಿಂದ 300 ರೂ ಗೆ ಮಾರಾಟವಾಗುತ್ತಿದೆ. ಚೆಂಡು ಹೂವು ಕೆ.ಜಿ.ಗೆ 100 ರೂ, ಕನಕಾಂಬರ 2,000 ರೂ, ಕಾಕಡ 500, ಗುಲಾಬಿ 250 ರೂ, ಸುಗಂಧರಾಜ 300 ರೂ, ಮತ್ತು ಮಲ್ಲಿಗೆ ಬೆಲೆ ಕೆ.ಜಿ.ಗೆ 800 ರೂ ತಲುಪಿದೆ.
ತಾತ್ಕಾಲಿಕ ಮಾರುಕಟ್ಟೆಗಳು ಸೃಷ್ಟಿ: ಸಿಲಿಕಾನ್ ಸಿಟಿ ಮಡಿವಾಳ, ಮಲ್ಲೇಶ್ವರ, ವಿಜಯನಗರ, ಗಾಂಧಿ ಬಜಾರ್, ಜಯನಗರ ಸೇರಿದಂತೆ ಅನೇಕ ಮಾರುಕಟ್ಟೆ ಮತ್ತು ಸುತ್ತಮುತ್ತ ತಾತ್ಕಾಲಿಕ ಮಾರುಕಟ್ಟೆಗಳು ಸೃಷ್ಟಿಯಾಗಿ ಸದ್ಯ ಹೂವು, ಹಣ್ಣು, ಬೂದುಗುಂಬಳಕಾಯಿ, ನಿಂಬೆಹಣ್ಣು ಹಾಗೂ ಪೂಜಾ ಸಾಮಗ್ರಿಗಳಿಂದ ತುಂಬಿ ತುಳುಕುತ್ತಿದೆ.
ಅನ್ಯ ರಾಜ್ಯಗಳಿಂದಲೂ ಬಾರದ ಬೂದುಗುಂಬಳ: ದಸರಾ ಹಬ್ಬಕ್ಕೆಂದು ತಮಿಳುನಾಡು, ಆಂಧ್ರಪ್ರದೇಶದಿಂದ ಬೂದುಗುಂಬಳಕಾಯಿ ಮಾರುಕಟ್ಟೆಗೆ ಬರುತ್ತಿತ್ತು. ಈ ಬಾರಿ ಅನ್ಯ ರಾಜ್ಯಗಳಲ್ಲೂ ಮಳೆಯಿಂದ ಬೆಳೆ ಕೈಗೆ ಬಂದಿಲ್ಲ. ಹೀಗಾಗಿ, ತುಂಬಾ ಕಡಿಮೆ ಪ್ರಮಾಣದಲ್ಲಿ ಬೂದುಗುಂಬಳ ಮಾರುಕಟ್ಟೆ ಬಂದಿದೆ. ಆದರೆ ಬೇಡಿಕೆ ಹೆಚ್ಚಾಗಿರುವುರಿಂದ ಬೆಲೆಗಳು ಗಗನಕ್ಕೇರಿವೆ. ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಮಳೆಯಿಂದ ಬೆಳೆ ಹಾನಿ: ರಾಜಧಾನಿಯಲ್ಲಿ ಸೊಪ್ಪು ತರಕಾರಿ ದರದಲ್ಲಿ ಭಾರಿ ಹೆಚ್ಚಳ