ಬೆಂಗಳೂರು: ರಾಜ್ಯದಲ್ಲಿ ನಡೆದ ವಿವಿಧ ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗರಿಷ್ಠ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗಾಗಿ ಪಕ್ಷವು ಗ್ರಾಮ ಸ್ವರಾಜ್ಯ ಸಮಾವೇಶ, ಪಂಚರತ್ನ ಸಮಿತಿ ರಚನೆ, ಬೂತ್ ಸಮಿತಿ ರಚನೆ ಮೂಲಕ ಪ್ರಯತ್ನ ಮಾಡಿತ್ತು. ಈ ಮೂಲಕ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳು ಮತ್ತು ಸಾಧನೆಯನ್ನು ಜನರಿಗೆ ತಿಳಿಸಲಾಗಿತ್ತು. ಜನರು ಅಭಿವೃದ್ಧಿ ಬೆಂಬಲಿಸಿ ಮತ ನೀಡಿ ಬಿಜೆಪಿ ಬೆಂಬಲಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡಿದ್ದಾರೆ ಎಂದು ಕಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಅಭಿನಂದಿಸಿರುವ ಅವರು, ಅಭ್ಯರ್ಥಿಗಳನ್ನು ಬೆಂಬಲಿಸಿದ ಎಲ್ಲ ಮತದಾರರು, ಇದಕ್ಕಾಗಿ ಶ್ರಮಿಸಿದ ಕಾರ್ಯಕರ್ತರು, ಮುಖಂಡರಿಗೆ ಅವರು ಧನ್ಯವಾದ ಸಮರ್ಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಚುನಾವಣೆ ಕಾರ್ಯತಂತ್ರದಲ್ಲಿ ಮಾರ್ಗದರ್ಶನ ನೀಡಿದ ರಾಜ್ಯದ ಉಸ್ತುವಾರಿಗಳು ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಕಟೀಲ್ ಕೃತಜ್ಞತೆ ಅರ್ಪಿಸಿದ್ದಾರೆ.