ಬೆಂಗಳೂರು: ರಾಜಧಾನಿಯ ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ವಿಫಲರಾಗಿರುವ ಬಿಬಿಎಂಪಿ ಮುಖ್ಯ ಆಯುಕ್ತರು, ಇಂಜಿನಿಯರ್ ಸೇರಿದಂತೆ ಅಸಮರ್ಥರೆಲ್ಲರನ್ನೂ ಸೇವೆಯಿಂದ ಅಮಾನತು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕಾಗುತ್ತದೆ ಎಂದು ಹೈಕೋರ್ಟ್ ಪಾಲಿಕೆಯ ಆಡಳಿತ ಮಂಡಳಿಗೆ ಖಡಕ್ ಎಚ್ಚರಿಕೆ ನೀಡಿದೆ.
ಬಿಬಿಎಂಪಿಯ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ವೇಳೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ವಿಭಾಗೀಯ ಪೀಠವು ಪಾಲಿಕೆ ಅಧಿಕಾರಿ ವರ್ಗವನ್ನು ತರಾಟೆಗೆ ತಗೆದುಕೊಂಡಿದೆ.
ರಸ್ತೆ ಗುಂಡಿ ಮುಚ್ಚುವ ಬಗ್ಗೆ ಅಮೆರಿಕನ್ ರೋಡ್ ಟೆಕ್ನಾಲಜೀಸ್ ಸಲ್ಯೂಷನ್ಸ್‌ಗೆ ಬಿಬಿಎಂಪಿಯು ಅಗತ್ಯ ಸಹಕಾರ ನೀಡದಿದ್ದರೆ ಹೈಕೋರ್ಟ್ ಕಠಿಣ ಆದೇಶ ಮಾಡಲಾಗುತ್ತದೆ ಎಂದು ಎಚ್ಚರಿಸಿತು. ರಸ್ತೆ ಗುಂಡಿ ಸಮಸ್ಯೆ ಬಗ್ಗೆ ಮುಖ್ಯ ಆಯುಕ್ತರ ಗಮನಕ್ಕೆ ತರಬೇಕು. ರಸ್ತೆ ಗುಂಡಿ ಮುಚ್ಚುವ ವಿಷಯದಲ್ಲಿ ಮತ್ತಷ್ಟು ಕಾಲಾವಕಾಶ ನೀಡಲು ಕೋರ್ಟ್ ಸಿದ್ಧವಿಲ್ಲ. ಇದು ಅಂತಿಮ ಅವಕಾಶವಾಗಿದೆ.
ಮುಂದಿನ ವಿಚಾರಣೆಯಲ್ಲಿ ಅತ್ಯಂತ ಕಠಿಣ ಕ್ರಮವನ್ನು ನ್ಯಾಯಾಲಯವು ತಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ ವಿಚಾರಣೆ ಗುರುವಾರಕ್ಕೆ ಮುಂದೂಡಿದೆ. ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಸಂಬಂಧ ಪಟ್ಟ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಆದೇಶ ಮಾಡಿದೆ.
ಹಿಂದಿನಂತೆಯೇ ಗುಂಡಿ ಮುಚ್ಚಲಾಗುತ್ತಿದೆ: ಅರ್ಜಿದಾರರ ಪರ ವಾದಿಸಿದ ಹಿರಿಯ ನ್ಯಾಯವಾದಿ ಎಸ್.ಆರ್. ಅನುರಾಧಾ ಅವರು 2,533 ರಸ್ತೆ ಗುಂಡಿಗಳನ್ನು ಮುಚ್ಚಬೇಕಿದೆ. ಅಮೆರಿಕನ್ ರೋಡ್ ಟೆಕ್ನಾಲಜೀಸ್ ಸಲ್ಯೂಷನ್ಸ್‌ಗೆ ಪೈಥಾನ್ ಯಂತ್ರ ಬಳಸಿ ಗುಂಡಿ ಮುಚ್ಚುವುದಕ್ಕೆ ಬಿಬಿಎಂಪಿಯು ಕಾರ್ಯಾದೇಶ ನೀಡಿಲ್ಲ. ಪೈಥಾನ್ ಯಂತ್ರಕ್ಕೆ ಬದಲಾಗಿ ಹಿಂದಿನ ರೀತಿಯಲ್ಲಿಯೇ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ನ್ಯಾಯಾಲಯವು ಸಾಕಷ್ಟು ಆಸಕ್ತಿ ತೋರಿಸಿ, ಜನರ ಹಿತಾಸಕ್ತಿ ಇಟ್ಟುಕೊಂಡು ಹಲವು ಆದೇಶಗಳನ್ನು ಮಾಡಿದೆ. ಎಆರ್‌ಟಿಎಸ್ ಮತ್ತು ಬಿಬಿಎಂಪಿ ಮತ್ತೆ ಹಗ್ಗಜಗ್ಗಾಟದಲ್ಲಿ ತೊಡಗಿವೆ. ಇದು ದುರದೃಷ್ಟಕರ ಸಂಗತಿ ಎಂದು ಹೇಳಿದರು.
ಈ ವಾದ ಗಮನಿಸಿದ ಕೋರ್ಟ್ 'ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದ ದರಕ್ಕೆ ಒಪ್ಪಿಗೆ ನೀಡಿದ್ದಾಗಿ ಹಿಂದೆ ನಡೆದ ವಿಚಾರಣೆ ವೇಳೆ ತಿಳಿಸಿದ್ದಿರಲ್ಲಾ. ಈ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆಯೇ ಅಥವಾ ಇಲ್ಲವೇ? ತಾತ್ಕಾಲಿಕ ಕಾರ್ಯಾದೇಶ ಎಂದರೇನು? ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ಮತ್ತೊಂದು ಸಂಸ್ಥೆಗೆ ನೀಡಲು ಕೋರ್ಟ್ ಆದೇಶಿಸಬೆಕಾಗುತ್ತದೆ' ಎಂದು ತಿಳಿಸಿತು.
ಕೋರ್ಟ್ ತಾಳ್ಮೆ ಪರೀಕ್ಷಿಸಬೇಡಿ: ರಸ್ತೆ ಗುಂಡಿ ಮುಚ್ಚುವುದು ವಿಳಂಬವಾಗುತ್ತಿರುವುದರಿಂದ ಎಲ್ಲರನ್ನೂ ತೆಗೆದು, ಸೇನೆ ಏಜೆನ್ಸಿಯನ್ನು ಕರೆಸಿ ರಸ್ತೆ ಗುಂಡಿ ಮುಚ್ಚಲು ಆದೇಶಿಸಬೇಕಾಗುತ್ತದೆ. ಮುಖ್ಯ ಆಯುಕ್ತರು, ಎಂಜಿನಿಯರ್ ಸೇರಿದಂತೆ ಎಲ್ಲರನ್ನೂ ಅಮಾನತು ಮಾಡಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕಾಗುತ್ತದೆ. ಏನು ನಡೆಯುತ್ತಿದೆ ಇಲ್ಲಿ? ಎಂದು ಖಾರವಾಗಿ ಪ್ರಶ್ನಿಸಿದ ಮುಖ್ಯನ್ಯಾಯಮೂರ್ತಿಗಳು ನಾಳೆಯೊಳಗೆ ಎಲ್ಲಾ ರಸ್ತೆಗಳಲ್ಲಿನ ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದ ಕಾರ್ಯಾದೇಶವನ್ನು ಕೋರ್ಟ್ಗೆ ಸಲ್ಲಿಸಬೇಕು. ನ್ಯಾಯಾಲಯದ ತಾಳ್ಮೆ ಪರೀಕ್ಷಿಸಬೇಡಿ. ಬಿಬಿಎಂಪಿ ಹಿತಾಸಕ್ತಿಗೆ ವಿರುದ್ಧವಾದ ಆದೇಶವನ್ನು ಮಾಡಬೇಕಾಗುತ್ತದೆ. ಇದು ಅತಿಯಾಯಿತು.. ಎಂದು ಪಾಲಿಕೆ ವಿರುದ್ಧ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ರಾಜ್ಯ ಸರ್ಕಾರಕ್ಕೆ ಒಪ್ಪಂದ ಕರಾರು ಸಲ್ಲಿಕೆ: ಬಿಬಿಎಂಪಿ ಪರವಾಗಿ ವಕೀಲ ಶ್ರೀನಿಧಿ ಅವರು ಕೋರ್ಟ್ ಪ್ರಶ್ನೆಗಳಿಗೆ ಉತ್ತರಿಸಿ ರಸ್ತೆಗುಂಡಿ ಮುಚ್ಚಲು ಪ್ರತಿ ಚದರ ಮೀಗೆ 598 ರೂಪಾಯಿ ದರಕ್ಕೆ ಎಆರ್‌ಟಿಎಸ್ ಒಪ್ಪಿಕೊಂಡಿದೆ. ಈ ಪ್ರಕಾರ ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ. ಕರಾರು ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆಡಳಿತಾತ್ಮಕ ಅನುಮೋದನೆ ಮಾತ್ರ ಬಾಕಿ ಇದೆ. ಬಹಳಷ್ಟು ಚರ್ಚೆ ಬಳಿಕ ಬಿಬಿಎಂಪಿ-ಆರ್‌ಟಿಎಸ್ ಪೈಥಾನ್ ಯಂತ್ರ ಬಳಕೆಯ ಪ್ರತಿ ಚದರ ಮೀ ಗೆ 598 ರೂಪಾಯಿಗೆ ಒಪ್ಪಿಕೊಂಡಿವೆ. ಈ ಸಂಬಂಧದ ಕರಡು ಒಪ್ಪಂದ ಕರಾರನ್ನು ಈಗಾಗಲೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸ್ಥಿತಿಗತಿ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಗವಿಸಿದ್ದೇಶ್ವರ ಮಠದ ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ 10 ಕೋಟಿ ಬಿಡುಗಡೆಗೆ ಸಿಎಂ ಸೂಚನೆ