ಬೆಂಗಳೂರು : ಮೆಟ್ರೋ ರೈಲು ಮಾರ್ಗ ಕಾಮಗಾರಿಯಲ್ಲಿ ತೊಡಗಿರುವ ನಗರದ ಕಣ್ಣೂರು ಕ್ಯಾಂಪ್ನಲ್ಲಿ 79 ಜನರಿಗೆ ಕೋವಿಡ್-19 ಸೋಂಕು ತಗುಲಿದೆ ಎಂಬ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಮೆಟ್ರೋ ರೋಗ ಹರಡುವ ಕೇಂದ್ರವಾಗಬಾರದು. ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಿಎಂಆರ್ಸಿಎಲ್ಗೆ ಎಚ್ಚರಿಸಿದೆ.
ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ವಿವಿಧ ಸಾರ್ವಜನಿಕ ಹಿಸಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ವಿಚಾರಣೆ ವೇಳೆ ಬಿಎಂಆರ್ಸಿಎಲ್ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಕಣ್ಣೂರು ಕ್ಯಾಂಪ್ನಲ್ಲಿ 211 ಮಂದಿ ಕಾರ್ಮಿಕರಿದ್ದಾರೆ. ಈ ಕ್ಯಾಂಪ್ನ 140 ಮಂದಿಗೆ ಕೊರೊನಾ ತಪಾಸಣೆ ನಡೆಸಿದಾಗ 79 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸೋಂಕಿತರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ 211 ಮಂದಿ ಕಾರ್ಮಿಕರು ಇರುವ ಕ್ಯಾಂಪ್ನಲ್ಲಿ 79 ಜನಕ್ಕೆ ಕೊರೊನಾ ಬಂದಿದೆ ಎಂದರೆ ನಿಮ್ಮ ನಿರ್ವಹಣೆ ಎಷ್ಟರ ಮಟ್ಟಿಗೆ ಉತ್ತಮವಾಗಿದೆ. ಕಣ್ಣೂರಿನಲ್ಲಿ ಎಷ್ಟು ಕಾರ್ಮಿಕರ ಕ್ಯಾಂಪ್ಗಳಿವೆ. ಸೋಂಕಿತರನ್ನು ಪ್ರತ್ಯೇಕ ಕ್ಯಾಂಪ್ನಲ್ಲಿರಿಸಲಾಗಿದೆಯೇ?. ಕಾರ್ಮಿಕರ ಸುರಕ್ಷತೆಗೆ ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ. ಕ್ವಾರಂಟೈನ್ಗೆ ಒಳಗಾಗಿರುವ ಕಾರ್ಮಿಕರಿಗೆ ವೇತನ ಪಾವತಿಸಲಾಗುತ್ತಿದೆಯೇ?. ನಗರದಲ್ಲಿ ಮೆಟ್ರೋ ಕಾರ್ಮಿಕರ ಎಷ್ಟು ಕ್ಯಾಂಪ್ಗಳಿವೆ ಎಂದು ಹಲವು ಪ್ರಶ್ನೆಗಳನ್ನು ಕೇಳಿತು.
ಇದಕ್ಕೆ ಬಿಎಂಆರ್ಸಿಎಲ್ ಪರ ವಕೀಲರು ಈ ಎಲ್ಲ ವಿಷಯಗಳನ್ನು ತಿಳಿದು ಮಾಹಿತಿ ನೀಡುವುದಾಗಿ ತಿಳಿಸಿದರು. ಅಸಮರ್ಪಕ ಉತ್ತರಕ್ಕೆ ಆಸಮಾಧಾನ ವ್ಯಕ್ತಪಡಿಸಿದ ಪೀಠ, ಬಿಎಂಆರ್ಸಿಎಲ್ ಎಲ್ಲ ಸಂಸ್ಥೆಗಳಂತೆ ಅಲ್ಲ. ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇವೆ. ಮೆಟ್ರೋ ಕೊರೊನಾ ಹರಡುವ ಕೇಂದ್ರವಾಗಬಾರದು. ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಯೋಜನೆಗೆ ತಡೆ ನೀಡಬೇಕಾಗುತ್ತದೆ ಎಂದು ಮೌಖಿಕ ಎಚ್ಚರಿಕೆ ನೀಡಿತು.
ಬಳಿಕ ಕಾರ್ಮಿಕರ ಸುರಕ್ಷತೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೆಯೇ ಮುಂದಿನ ವಿಚಾರಣೆ ವೇಳೆ ಸಮಗ್ರ ಮಾಹಿತಿಯುಳ್ಳ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿ, ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿತು.