ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ತೀವ್ರವಾಗಿ ವ್ಯಾಪಿಸುತ್ತಿರುವುದನ್ನು ತಡೆಗಟ್ಟುವ ಕ್ರಮವಾಗಿ ಹೈಕೋರ್ಟ್ ಫಿಸಿಕಲ್ ನೋಟಿಸ್ ಬದಲಿಗೆ ಇ-ಮೇಲ್ ಮೂಲಕ ನೋಟಿಸ್ ಜಾರಿ ಮಾಡುವುದಾಗಿ ತಿಳಿಸಿದೆ.
ಅದಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರ ಸೇರಿದಂತೆ ಎಲ್ಲ ಸರ್ಕಾರಿ ಪ್ರಾಧಿಕಾರಗಳ ಇ-ಮೇಲ್ ವಿಳಾಸಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದೆ. ಕೋವಿಡ್ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
ಅಲ್ಲದೇ, ರಾಜ್ಯ ಹಾಗೂ ಕೇಂದ್ರದ ವಿವಿಧ ಇಲಾಖೆಗಳು, ನಿಗಮ-ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ಪ್ರಾಧಿಕಾರಗಳ ಇ-ಮೇಲ್ ವಿಳಾಸಗಳನ್ನು ಸಂಗ್ರಹಿಸಿ ಕೊಡುವಂತೆ ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ಗೆ ನಿರ್ದೇಶಿಸಿದೆ.
ಇದೇ ವೇಳೆ ಇ-ಮೇಲ್ ಮೂಲಕವೇ ನೋಟಿಸ್ ಸ್ವೀಕರಿಸುವಂತೆ ಕೇಂದ್ರ ರಾಜ್ಯಗಳಿಗೆ ಹೈಕೋರ್ಟ್ ಸೂಚಿಸಿದೆ. ದೇಶದ ಎಲ್ಲ ನ್ಯಾಯಾಲಯಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುತ್ತಿರುವುದನ್ನು ಉಲ್ಲೇಖಿಸಿರುವ ಪೀಠ, ಸೋಂಕು ಹರಡಲು ನ್ಯಾಯಾಲಯಗಳು ಕಾರಣವಾಗಬಾರದು ಎಂದು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದೆ. ಇನ್ನು, ನಿಗದಿತ ಅವಧಿಯಲ್ಲಿ ವಿಲೇವಾರಿಯಾಗಬೇಕಿದ್ದ ಪ್ರಕರಣಗಳ ವಿಚಾರಣೆಗೆ ಕಾಲಾವಕಾಶವನ್ನು ವಿಸ್ತರಿಸಿದೆ.