ಬೆಂಗಳೂರು: ಭೂ ಸ್ವಾಧೀನ ಪ್ರಕರಣವೊಂದಕ್ಕೆ ಸಂಬಂಧಿಸಿದ ರಿಟ್ ಅರ್ಜಿಯಲ್ಲಿ ಕಚೇರಿ ಆಕ್ಷೇಪಣೆ ಪೂರೈಸಲು ವಿಳಂಬ ತೋರಿದ್ದ ಅರ್ಜಿದಾರರೊಬ್ಬರಿಗೆ ಹೈಕೋರ್ಟ್, ಹಿರಿಯ ವಕೀಲ ಸಿ.ಹೆಚ್. ಹನುಮಂತರಾಯ ಅವರು ಬರೆದ 'ವಕೀಲರೊಬ್ಬರ ವಗೈರೆಗಳು' ಪುಸ್ತಕವನ್ನು ಕರ್ನಾಟಕ ನ್ಯಾಯಾಂಗ ಅಕಾಡೆಮಿಗೆ ಸಲ್ಲಿಸುವ ದಂಡ ವಿಧಿಸಿದೆ.
ತುಮಕೂರಿನ ಭಾಗ್ಯನಗರದ ಮಹಾಲಕ್ಷ್ಮಮ್ಮ ಮತ್ತು ಜಿ.ಮಂಗಳಾ ಎಂಬುವರು ಭೂ ಸ್ವಾಧೀನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಂಬಂಧ ಕಚೇರಿ ಆಕ್ಷೇಪಣೆಗಳನ್ನು ಅರ್ಜಿದಾರರ ಪರ ವಕೀಲರು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಅರ್ಜಿಯು ವಿಚಾರಣೆಗೆ ಮಾನ್ಯತೆಯನ್ನು ಕಳೆದುಕೊಂಡಿತ್ತು. ಆದರೆ, ಅರ್ಜಿಯನ್ನು ಮತ್ತೆ ವಿಚಾರಣೆಗೆ ಪರಿಗಣಿಸುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಕೆ ಮಾಡಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, "ಅರ್ಜಿ ಪುರಸ್ಕರಿಸಲಾಗುತ್ತಿದೆ. ಆದರೆ, ನಿಮ್ಮ ನಿರ್ಲಕ್ಷ್ಯಕ್ಕೆ ದಂಡದ ರೂಪದಲ್ಲಿ ವಕೀಲ ಸಿ.ಹೆಚ್. ಹನುಮಂತರಾಯ ಅವರು ಬರೆದಿರುವ 'ವಕೀಲರೊಬ್ಬರ ವಗೈರೆಗಳು' ಪುಸ್ತಕವನ್ನು ಅಕಾಡೆಮಿಗೆ ನೀಡಿ ಮತ್ತು ಒಂದು ವಾರದಲ್ಲಿ ಕಚೇರಿ ಆಕ್ಷೇಪಣೆ ಸರಿಪಡಿಸಬೇಕು" ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ಮಾಡಾಳ್ ವಿರುಪಾಕ್ಷಪ್ಪ ನಿರೀಕ್ಷಣ ಜಾಮೀನು ಅರ್ಜಿ ತ್ವರಿತ ವಿಚಾರಣೆಗೆ ಎಎಬಿ ಕಳವಳ, ಸಿಜೆಐಗೆ ಪತ್ರ
ಲೈಂಗಿಕ ಕಿರುಕುಳ ಪ್ರಕರಣ ರದ್ದು: ಪ್ರತ್ಯೇಕ ಪ್ರಕರಣವೊಂದರಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ವೇದವ ಎಂಬುವರನ್ನು ಹೈಕೋರ್ಟ್ ಆರೋಪ ಮುಕ್ತಗೊಳಿಸಿದೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ಮತ್ತು ಈ ಸಂಬಂಧ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದು ಮಾಡಬೇಕು ಎಂದು ಕೋರಿ ಡಾ. ವೇದವ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಜೊತೆಗೆ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 ಮತ್ತು 506ರ ಅಡಿ ದಾಖಲಾಗಿರುವ ಪ್ರಕರಣದಿಂದ ಅರ್ಜಿದಾರರನ್ನು ಆರೋಪ ಮುಕ್ತಗೊಳಿಸಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ಅಲ್ಲದೆ, 2013ರ ಆಗಸ್ಟ್ 2ರಂದು ವೇದವ ಅವರು ವಿದ್ಯಾರ್ಥಿನಿಯ ಜೊತೆ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದು, 2014ರ ಅಕ್ಟೋಬರ್ 16ರಂದು ಎಫ್‌ಐಆರ್ ದಾಖಲಿಸಲಾಗಿದೆ. ಇದರ ಅರ್ಥ ದೂರುದಾರರು ಅರ್ಜಿದಾರರ ಸಂಬಂಧದಲ್ಲಿದ್ದರು ಎಂಬುದು ತಿಳಿಯಲಿದೆ. ಇಬ್ಬರ ನಡುವಿನ ಸಂಬಂಧ ಹದಗೆಟ್ಟಾಗ ದೂರುದಾರೆಯು ಪ್ರತೀಕಾರ ತೀರಿಸಿಕೊಳ್ಳುವ ದುರುದ್ದೇಶದಿಂದ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ, ವೇದವ ಅವರ ವಿರುದ್ಧ ಕಾನೂನು ಪ್ರಕ್ರಿಯೆ ಮುಂದುವರೆಸುವುದು ಕಾನೂನಿನ ದುರ್ಬಳಕೆಯಾಗಲಿದೆ ಎಂದು ಪೀಠವು ಆದೇಶದಲ್ಲಿ ವಿವರಿಸಿದೆ. ಜೊತೆಗೆ ಈ ಆರೋಪವು ಅರ್ಜಿದಾರರು ಬಲವಂತವಾಗಿ ಆಕೆಯ ಜೊತೆ ಸಂಭೋಗಿಸಿದ್ದರು ಎಂಬುದಾಗಿದೆ. ಇದಕ್ಕೆ ಐಪಿಸಿ ಸೆಕ್ಷನ್ 376, 506 ಅನ್ವಯಿಸುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಪ್ರಕರಣದ ಹಿನ್ನೆಲೆ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾದ ವೇದವ ಅವರು ಆಗಿಂದಾಗ್ಗೆ ದೂರುದಾರೆಯ ಮನೆಗೆ ಭೇಟಿ ನೀಡುತ್ತಿದ್ದರು. 2013ರ ಆಗಸ್ಟ್ 2ರಂದು ದೂರುದಾರೆಯು ಮನೆಯಲ್ಲಿ ಒಬ್ಬರೇ ಇದ್ದಾಗ ಆಕೆಯ ಜೊತೆ ಬಲವಂತದಿಂದ ಸಂಭೋಗ ನಡೆಸಿದ್ದರು. ಈ ಘಟನೆಯನ್ನು ಯಾರಿಗೂ ಹೇಳದಂತೆ, ಒಂದೊಮ್ಮೆ ಹೇಳಿದರೆ ರೌಡಿಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು. ಮತ್ತೆ, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ, ಬಲವಂತದಿಂದ ಸಂಭೋಗ ನಡೆಸಿದ್ದರು ಎಂದು ದೂರಲಾಗಿತ್ತು.