ಬೆಂಗಳೂರು: ಪತಿಯ ವಿರುದ್ಧ ಸುಳ್ಳು ಆರೋಪದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಒಂದು ರೀತಿಯ ಹಿಂಸೆ ನೀಡುವ ಪ್ರಕ್ರಿಯೆಯಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಪತ್ನಿಯಿಂದ ಪತಿಗೆ ಕೌಟುಂಬಿಕ ನ್ಯಾಯಾಲಯ ಮಂಜೂರು ಮಾಡಿದ್ದ ವಿಚ್ಛೇದನ ಎತ್ತಿಹಿಡಿದಿದೆ.
ಕೌಟುಂಬಿಕ ನ್ಯಾಯಾಲಯ ಮಂಜೂರು ಮಾಡಿದ್ದ ವಿಚ್ಛೇದನ ರದ್ದು ಕೋರಿ ದಾವಣಗೆರೆ ಮೂಲದ ಮಂಜಮ್ಮ(ಹೆಸರು ಬದಲಿಸಲಾಗಿದೆ) ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ವಿಜಯ್ ಕುಮಾರ್ ಎ ಪಾಟೀಲ್ ಅವರಿದ್ದ ನ್ಯಾಯಪೀಠ ಇತ್ತೀಚೆಗೆ ಈ ಆದೇಶ ನೀಡಿದೆ.
ಅಲ್ಲದೆ, ಮೇಲ್ಮನವಿದಾರರು(ಪತ್ನಿ) ವರದಕ್ಷಿಣೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ್ದ ದೂರು ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ ಪತಿಯನ್ನು ದೋಷಮುಕ್ತ ಎಂದು ಘೋಷಣೆ ಮಾಡಿದೆ. ಜತೆಗೆ, ಈ ರೀತಿಯ ಸುಳ್ಳು ಆರೋಪದಲ್ಲಿ ಪತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಒಂದು ರೀತಿಯ ಕಿರುಕುಳ ನೀಡುವ ಪ್ರಕ್ರಿಯೆಯಾಗಿದೆ ಎಂದು ನ್ಯಾಯಪೀಠ ತಿಳಿಸಿದೆ. ಜತೆಗೆ, ಸುಳ್ಳು ಆರೋಪದಲ್ಲಿ ಸಲ್ಲಿಸಿರುವ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯ ಪತಿಯಿಂದ ಯಾವುದೇ ರೀತಿಯ ವರದಕ್ಷಿಣೆ ಕಿರುಕುಳದ ಒತ್ತಡ ಹೇರಿಲ್ಲ ಎಂಬುದಾಗಿ ಹೇಳಿದೆ ಎಂದು ನ್ಯಾಯಪೀಠ ತಿಳಿಸಿರುವುದಾಗಿ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ ಏನು: ಮೇಲ್ಮನವಿದಾರರಾದ ಮಂಜಮ್ಮ ಅವರು ದಾವಣಗೆರೆಯ ನಾಗರಾಜು(ಇಬ್ಬರ ಹೆಸರು ಬದಲಿಸಲಾಗಿದೆ) ಎಂಬುವರನ್ನು 1999 ವಿವಾಹವಾಗಿದ್ದರು. ಒಂದು ವರ್ಷದ ಕಾಲ ಪತಿಯ ಮನೆಯಲ್ಲಿ ನೆಲೆಸಿದ್ದ ಅವರು, ತವರು ಮನೆಗೆ ಹಿಂದಿರುಗಿದ್ದರು. ಬಳಿಕ ಪತಿಯ ವಿರುದ್ಧ 2007ರಲ್ಲಿ ಪತಿಯಿಂದ ಜೀವನಾಧಾರ ವೆಚ್ಚ ಮತ್ತು 2008ರಲ್ಲಿ ಕೌಟುಂಬಿಕ ದೌರ್ಜನ್ಯ ಆರೋಪಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದರು. ಎರಡೂ ಪ್ರಕರಣಗಳಲ್ಲಿ ನಾಗರಾಜು ದೋಷಮುಕ್ತರು ಎಂದು ವಿಚಾರಣಾ ನ್ಯಾಯಾಲಯ ಪ್ರಕಟಿಸಿತ್ತು.
ಆ ನಂತರ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ನಾಗರಾಜು ಅವರು ಮಂಜಮ್ಮ ಅವರಿಂದ ವೈವಾಹಿಕ ಬಂಧನದಿಂದ ಬಿಡುಗಡೆ ಮಾಡಿಕೊಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಮಂಜಮ್ಮ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಪೀಠ, ಮೇಲ್ಮನವಿದಾರರು, ಪತಿಯ ಮನೆಯಲ್ಲಿ ಸುಮಾರು ಒಂದು ವರ್ಷ ಜೀವನ ನಡಸಿದ್ದಾರೆ. ಅಲ್ಲಿಂದ ಹೊರ ಬಂದ ಬಳಿಕ ಮತ್ತೆ ಮನೆಗೆ ಹಿಂದಿರುಗಲು ಯಾವುದೇ ಪ್ರಯತ್ನ ಮಾಡಿಲ್ಲ. ಈ ಕುರಿತಂತೆ ಲೀಗಲ್ ನೋಟಿಸ್ ಸಹ ನೀಡಿಲ್ಲ. ದಾಂಪತ್ಯ ಜೀವನ ಮರುಸ್ಥಾಪನೆಗಾಗಿ ನ್ಯಾಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಿಲ್ಲ. ಈ ಅಂಶಗಳನ್ನು ಗಮನಿಸಿದರೆ ಪತಿಗೆ ಮಾನಸಿಕ ನೀಡುವುದಕ್ಕಾಗಿ ಸಕಾರಣವಿಲ್ಲದಿದ್ದರೂ, ಮೇಲ್ಮನವಿದಾರರು ಪತಿಯ ಮನೆಯನ್ನು ತೊರೆದಿದ್ದಾರೆ ಎಂಬ ಅಂಶ ಗೊತ್ತಾಗಲಿದೆ ಎಂದು ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ:ಶಿಯೋಮಿ 5,551.21 ಕೋಟಿ ವಶಪಡಿಸಿಕೊಂಡಿದ್ದ ಇಡಿ ಕ್ರಮ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್