ಬೆಂಗಳೂರು : ಕಳೆದ 20 ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಬ್ರಿಟಿಷ್ ದಂಪತಿಗೆ ಪರಿಹಾರ ನೀಡುವಂತೆ ಲಂಡನ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಜಾರಿ ಮಾಡಲಾಗದು ಎಂದು ಹೈಕೋರ್ಟ್ ತಿಳಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು.
ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದಲ್ಲಿ ನಡೆದಿದ್ದ ವಿಚಾರಣೆ ವೇಳೆ ಸಲ್ಲಿಕೆಯಾಗಿದ್ದ ದಾಖಲೆಗಳನ್ನು ಪರಿಶೀಲನೆ ನಡೆಸಿತು. ಲಂಡನ್ ನ್ಯಾಯಾಲಯ ಪರಿಹಾರ ಘೋಷಣೆ ಮಾಡುವುದಕ್ಕೂ ಮುನ್ನ ಮೆರಿಟ್ ಆಧರಿಸಿಲ್ಲ, ಹೀಗಾಗಿ ಆದೇಶ ಜಾರಿಗೊಳಿಸಲಾಗದು ಎಂದು ಪೀಠ ತಿಳಿಸಿದೆ.
ಜೊತೆಗೆ, ಅರ್ಜಿದಾರರು ವಿದೇಶಿ ನ್ಯಾಯಾಲಯದ ಆದೇಶದ ಸರ್ಟಿಫೈಡ್ ಪ್ರತಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ, ಕೇವಲ ನಕಲು ಪ್ರತಿಯನ್ನು ಸಲ್ಲಿಸಲಾಗಿದೆ. ಆ ನ್ಯಾಯಾಲಯ ಮೆರಿಟ್ ಆಧಾರದ ಮೇಲೆ ಆದೇಶ ನೀಡಿಲ್ಲ. ಅಲ್ಲದೇ, ಆ ಆದೇಶವನ್ನು ಹೊರಡಿಸುವ ಮುನ್ನ ಪ್ರತಿವಾದಿ ಸಲ್ಲಿಸಿದ್ದ ಆಕ್ಷೇಪಣೆಯನ್ನೂ ಸಹ ಪರಿಗಣಿಸಿಲ್ಲ ಎಂದು ನ್ಯಾಯಾಲಯ ಆದೇಶ ನೀಡಿದೆ.
ಅಲ್ಲದೆ, ವಿದೇಶಿ ನ್ಯಾಯಾಲಯದ ನೋಟಿಸ್‌ಗೆ ಕೆಎಸ್‌ಆರ್‌ಟಿಸಿ ಉತ್ತರ ನೀಡಿದ್ದರೂ ಸಹ ಅದನ್ನು ಆ ನ್ಯಾಯಾಲಯ ಪರಿಗಣಿಸಿಯೇ ಇಲ್ಲ. ಹಾಗಾಗಿ ಒಟ್ಟಾರೆ, ವಿದೇಶಿ ಕೋರ್ಟ್ ಯಾವುದೇ ಮೆರಿಟ್ ಆಧರಿಸಿ ಆದೇಶ ಹೊರಡಿಸಿಲ್ಲ, ಆದ್ದರಿಂದ ಅಂತಹ ಆದೇಶವನ್ನು ಜಾರಿಗೊಳಿಸಲಾಗದು ಎಂದು ತಿಳಿಸಿದೆ.
ವಿದೇಶಿ ನ್ಯಾಯಾಲಯ ಸಹಜ ನ್ಯಾಯ ಪಾಲನೆ ಮಾಡಿಲ್ಲ. ಘಟನೆಗೆ ಕಾರಣಗಳನ್ನು ಉಲ್ಲೇಖಿಸುವಾಗ ಕೋರ್ಟ್ ವ್ಯಾಪ್ತಿ, ಕೆಎಸ್‌ಆರ್‌ಟಿಸಿ ಉತ್ತರ ಸೇರಿದಂತೆ ಯಾವ ಮೆರಿಟ್ ಅಂಶಗಳನ್ನೂ ಸಹ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಹಾಗಾಗಿ, ಆ ಆದೇಶ ಇಲ್ಲಿ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ನ್ಯಾಯಾಲಯ, ಪ್ರತಿವಾದಿ ದಂಪತಿ ವಿಚಾರಣಾ ನ್ಯಾಯಾಲಯದ ಮುಂದೆ ಸಲ್ಲಿಸಿರುವ ಅರ್ಜಿ ಮಾನ್ಯ ಮಾಡಲಾಗದು ಎಂಬುದಾಗಿ ಕೋರ್ಟ್ ಹೇಳಿದೆ.
ಪ್ರಕರಣದ ಹಿನ್ನೆಲೆ: ಇಂಗ್ಲೆಂಡ್‌ನ ನಿಗೆಲ್ ರೋರ್ಡಿಕ್ ಲಾಯ್ಡ್ ಹರಡೈನ್ ಮತ್ತು ಕರೋಲ್ ಅನ್ ಹರಡೈನ್ ದಂಪತಿ 2002ರ ಮಾರ್ಚ್ 18ರಂದು ಮೈಸೂರಿನಿಂದ ಗುಂಡ್ಲುಪೇಟೆಗೆ ಕಾರಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿತ್ತು. ಘಟನೆಯಿಂದ ದಂಪತಿ ಗಾಯಗೊಂಡಿದ್ದರು. ಅವರು ಯುನೈಟೆಡ್ ಕಿಂಗ್ಡಮ್ಗೆ ತೆರಳಿದ ನಂತರ ಅಲ್ಲಿನ ಎಕ್ಸೆಟೆರ್ ಕೌಂಟಿ ಕೋರ್ಟ್‌ನಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಅವರ ಅರ್ಜಿ ಮಾನ್ಯ ಮಾಡಿ ಪರಿಹಾರ ನೀಡುವಂತೆ ಕೆಎಸ್‌ಆರ್‌ಟಿಸಿಗೆ ನಿರ್ದೇಶನ ನೀಡಿತ್ತು. ಆನಂತರ ಆ ಆದೇಶ ಜಾರಿಗೊಳಿಸುವಂತೆ ಬೆಂಗಳೂರಿನ 25ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಯುಕೆ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಸಲ್ಲಿಸಿದ್ದ ಅರ್ಜಿಯನ್ನು ಸಿಟಿ ಸಿವಿಲ್ ಕೋರ್ಟ್ ವಜಾಗೊಳಿಸಿ ಆದೇಶಿಸಿತ್ತು. ಹಾಗಾಗಿ ಕೆಎಸ್‌ಆರ್‌ಟಿಸಿ ಹೈಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ: ರಾಜಕಾಲುವೆಗಳ ತೆರವಿಗೆ ಸಮಗ್ರ ನೀತಿ ಜಾರಿ ಮಾಡದ ಬಿಬಿಎಂಪಿ ಕ್ರಮಕ್ಕೆ ಹೈಕೋರ್ಟ್ ಗರಂ..