ಬೆಂಗಳೂರು: ಭೂ ಕಬಳಿಕೆ ಆರೋಪದಲ್ಲಿ ಸಚಿವ ಭೈರತಿ ಬಸವರಾಜ್ ವಿರುದ್ಧದ ವಿಚಾರಣಾಧೀನ ನ್ಯಾಯಾಲಯದಲ್ಲಿ ದಾಖಲಾಗಿದ್ದ ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.
ಆರೋಪ ಸಂಬಂಧ 42ನೇ ಎಸಿಎಂಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಸಚಿವ ಭೈರತಿ ಬಸರವಾಜ್ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ನ್ಯಾಯಪೀಠ, ಪ್ರಕರಣವು ಸಿವಿಲ್ ವ್ಯಾಜ್ಯವಾಗಿರುವುದರಿಂದ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಏನಿದು ಪ್ರಕರಣ?: ಬೆಂಗಳೂರು ಪೂರ್ವ ತಾಲೂಕಿನ ಕೆಆರ್ಪುಂ ಹೋಬಳಿಯ ಕಲ್ಕೆರೆ ಗ್ರಾಮದ ಸರ್ವೇ ನಂಬರ್ 375/ರಲ್ಲಿನ 22.43 ಎಕರೆ ಜಾಗ ಅದೂರ್ ಅಣ್ಣೈಯಪ್ಪಗೆ ಎಂಬುವರಿಗೆ ಸೇರಿದೆ. 2003ರ ಮೇ 21ರಂದು ಸಂಬಂಧಿಕರಾದ ಮಾದಪ್ಪ ಮತ್ತು ಪಿಳ್ಳಮಾದಪ್ಪ ಅವರು ಖಾಲಿ ಕಾಗದಗಳ ಮೇಲೆ ಅದೂರ್ ಅಣ್ಣೈಯಪ್ಪ ಅವರ ಸಹಿ ಮತ್ತು ಹೆಬ್ಬೆಟ್ಟು ಪಡೆದುಕೊಂಡರು.
ನಂತರ ಪಾಲುದಾರಿಕೆ ಕರಾರು ಸಿದ್ಧಪಡಿಸಿಕೊಂಡು ಸಚಿವ ಭೈರತಿ ಬಸವರಾಜ್ ಅವರಿಗೆ ಕೆಲ ದಿನಗಳಲ್ಲಿ ಅಕ್ರಮವಾಗಿ 22.43 ಎಕರೆ ಜಮೀನು ಮಾರಾಟ ಮಾಡಿದ್ದಾರೆ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಅಣ್ಣೈಯಪ್ಪ ಪುತ್ರ ಮಾದಪ್ಪ ಖಾಸಗಿ ದೂರು ದಾಖಲಿಸಿದ್ದರು. ಈ ದೂರನ್ನು ವಿಚಾರಣೆಗೆ ಅಂಗೀಕರಿಸಿದ್ದ ನಗರದ 42ನೇ ಎಸಿಎಂಎಂ ನ್ಯಾಯಾಲಯ 2021ರ ನ.25ರಂದು ಭೈರತಿ ಬಸವರಾಜ್‌ಗೆ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.
ಇದನ್ನೂ ಓದಿ: ಸಚಿವ ಭೈರತಿ ಬಸವರಾಜ್ ವಿರುದ್ಧ ಭೂ ಕಬಳಿಕೆ ಆರೋಪ: ವಿಚಾರಣೆಗೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್