ಬೆಂಗಳೂರು : ರಾಜ್ಯದ ನಗರಸಭೆಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಚುನಾವಣೆ ಹಿನ್ನೆಲೆಯಲ್ಲಿ ರೊಟೇಷನ್ ಪದ್ಧತಿ ಪ್ರಕಾರ ಕರಡು ಮೀಸಲು ಪಟ್ಟಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಮೂವರು ಹಿರಿಯ ವಕೀಲರ ಸಮಿತಿ ರಚನೆ ಮಾಡಿ ಹೈಕೋರ್ಟ್ ಏಕ ಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ವಿಭಾಗೀಯ ಪೀಠ ರದ್ದುಪಡಿಸಿ ಆದೇಶಿಸಿದೆ.
ಹಾಸನ ನಗರಸಭೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ವರ್ಗಕ್ಕೆ (ಎಸ್ಟಿ) ಮೀಸಲು ನಿಗದಿಪಡಿಸಿರುವ ಕ್ರಮ ಪ್ರಶ್ನಿಸಿ ಎಚ್.ವಿ. ಚಂದ್ರೇಗೌಡ ಸೇರಿ ಹಾಸನ ನಗರಸಭೆಯ 21 ಮಂದಿ ಚುನಾಯಿತ ಸದಸ್ಯರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಅ.15ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಸರ್ಕಾರ ನಿಗದಿಪಡಿಸಿದ್ದ ಮೀಸಲು ಪಟ್ಟಿಯಲ್ಲಿ ಆವರ್ತನೆ ಬಗ್ಗೆ ಪರಿಶೀಲಿಸಿ ಕರಡು ವರದಿ ಸಲ್ಲಿಸಲು ರಾಜ್ಯ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ಚುನಾವಣಾ ಆಯೋಗದ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಹಾಗೂ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿ ರಚಿಸಿತ್ತು.
ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ವಿಭಾಗೀಯ ಪೀಠ, ಸಮಿತಿ ರಚಿಸಿದ ಏಕ ಸದಸ್ಯ ಪೀಠದ ಆದೇಶವನ್ನು ರದ್ದುಪಡಿಸಿ ಆದೇಶಿಸಿದೆ. ಮೀಸಲು ಪಟ್ಟಿ ಆವರ್ತನಾ ನಿಯಮ ಪಾಲನೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ನ್ಯಾಯಾಲಯದ ಕಾರ್ಯವಾಗಿದೆ. ಅದಕ್ಕಾಗಿ ಸಮಿತಿ ರಚಿಸಿದ ಕ್ರಮ ಸೂಕ್ತವಾಗಿಲ್ಲ ಎಂದು ವಿಭಾಗೀಯ ಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.