ಬೆಂಗಳೂರು: ಸಾಗರೋತ್ತರ ಭಾರತೀಯ ನಾಗರಿಕರ (ಒಸಿಐ) ಕಾರ್ಡ್ ಹೊಂದಿರುವ 45 ವಿದ್ಯಾರ್ಥಿಗಳಿಗೆ 2021ರ ಸಿಇಟಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಹೈಕೋರ್ಟ್ ಕರ್ನಾಟಕ, ಪರೀಕ್ಷಾ ಪ್ರಾಧಿಕಾರಕ್ಕೆ ಆದೇಶಿಸಿದೆ.
2021ರ ಮಾ.4ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆದೇಶಗಳ್ನು ಪ್ರಶ್ನಿಸಿ ಒಸಿಐ ಕಾರ್ಡ್ ಹೊಂದಿದ ವಿದ್ಯಾರ್ಥಿಗಳಾದ ಅಲೆಖ್ಯ ಪೊನ್ನೆಕಾಂತಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ:
ಮಾ.4ರಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ, ಭಾರತೀಯ ನಾಗರಿಕರಿಗೆ ವಿಶೇಷವಾಗಿ ಮೀಸಲಿಟ್ಟಿರುವ ಸೀಟುಗಳಿಗೆ ಸಾಗರೋತ್ತರ ಭಾರತೀಯರು ಅನರ್ಹರು. ಅವರು ಕೇವಲ ಎನ್ಆರ್ಐ ಸೀಟುಗಳಿಗೆ ಮಾತ್ರ ಅರ್ಹರು ಎಂದಿತ್ತು. ಈ ಮೇರೆಗೆ ಕಳೆದ ಜೂ.14ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತೊಂದು ಆದೇಶ ಹೊರಡಿಸಿ, ವೃತ್ತಿ ಶಿಕ್ಷಣ ಕೋರ್ಸ್ಗೆ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಸಾಗರೋತ್ತರ ಭಾರತೀಯರಿಗೆ ಪ್ರವೇಶವಿಲ್ಲ ಎಂದು ತಿಳಿಸಿತ್ತು.
ಈ ಆದೇಶಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳು, ಸಿಇಟಿ ಪರೀಕ್ಷೆ ಬರೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳದಿದ್ದರೆ, ಕೌನ್ಸೆಲಿಂಗ್ನಲ್ಲಿ ಭಾಗವಹಿಸಲು ಕೂಡ ಸಾಧ್ಯವಿಲ್ಲ. ಭಾರತದಲ್ಲಿಯೇ ಹಲವು ವರ್ಷಗಳಿಂದ ವಿದ್ಯಾಭ್ಯಾಸ ಮಾಡಿದ್ದು, ತಮಗೂ ಸಿಇಟಿ ಬರೆಯಲು ಅವಕಾಶ ನೀಡಬೇಕು ಎಂದು ಕೋರಿದ್ದರು.
ಮನವಿ ಪರಿಗಣಿಸಿದ ಪೀಠ, ವಿದ್ಯಾರ್ಥಿಗಳು, ನೋಂದಾಯಿಸಿಕೊಳ್ಳದಿದ್ದರೆ ತೀವ್ರ ನಷ್ಟಕ್ಕೆ ಒಳಗಾಗಲಿದ್ದಾರೆ. ಭವಿಷ್ಯಕ್ಕೂ ತೊಂದರೆಯಾಗಬಹುದು ಎಂದು ಅಭಿಪ್ರಾಯಪಟ್ಟು ಪರೀಕ್ಷೆಗೆ ಅನುಮತಿಸುವಂತೆ ಆದೇಶಿಸಿದೆ.
ಇದನ್ನೂ ಓದಿ: ಸಿಎಂ ಬಿಎಸ್ವೈಗೆ ‘ಭೂ’ಕಂಟಕ: ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ತಿರಸ್ಕರಿಸಿದ ಕೋರ್ಟ್