ಬೆಂಗಳೂರು: ನಿಯಮಗಳನ್ನು ಉಲ್ಲಂಘಿಸಿ ರಾಜ್ಯ ವನ್ಯಜೀವಿ ಮಂಡಳಿಗೆ ಅರ್ಹತೆ ಇಲ್ಲದವರನ್ನು ಹಾಗೂ ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವವರನ್ನೂ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಬೆಂಗಳೂರಿನ ಪರಿಸರವಾದಿ ಪ್ರಮೋದ್ ವೆಂಕಟೇಶ ಮೂರ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಅರಣ್ಯ ಸಂರಕ್ಷಕರು ಹಾಗೂ ರಾಜ್ಯ ವನ್ಯಜೀವಿ ಮಂಡಳಿಗೆ ನೋಟಿಸ್ ಜಾರಿ ಮಾಡಿತು. ಅಲ್ಲದೆ, ಮಂಡಳಿಗೆ ಸದಸ್ಯರನ್ನಾಗಿ ನೇಮಕಗೊಂಡಿರುವ ವ್ಯಕ್ತಿಗಳನ್ನೂ ಪ್ರತಿವಾದಿಯನ್ನಾಗಿ ಅರ್ಜಿಯಲ್ಲಿ ಸೇರಿಸುವಂತೆ ಅರ್ಜಿದಾರರಿಗೆ ಸೂಚಿಸಿತು.
ವಿಚಾರಣೆ ಸಂದರ್ಭದಲ್ಲಿ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲೆ ಅನುಚೆಂಗಪ್ಪ ಅವರು, ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರ ಸೆಕ್ಷನ್ 6(1) ಅಡಿಯಲ್ಲಿ ರಾಜ್ಯ ವನ್ಯಜೀವಿ ಮಂಡಳಿಗೆ ಪರಿಸರವಾದಿಗಳು, ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವವರು ಮತ್ತು ಕಾಡಿನ ಸಮೀಪ ಬುಡಕಟ್ಟು ಸಮುದಾಯದವರನ್ನು ಸದಸ್ಯರಾಗಿ ನೇಮಿಸಬೇಕು. ಆದರೆ ಸರ್ಕಾರ ವನ್ಯ ಜೀವಿ ಸಂರಕ್ಷಣೆ ಬಗ್ಗೆ ಯಾವುದೇ ಜ್ಞಾನವಿಲ್ಲದ ಅನರ್ಹರನ್ನು ಹಾಗೂ ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವವರನ್ನು ಸದಸ್ಯರನ್ನಾಗಿ ನೇಮಿಸಿದೆ. ನಿಯಮಗಳನ್ನು ಗಾಳಿಗೆ ತೂರಿ ಅನರ್ಹರನ್ನು ಮಂಡಳಿಗೆ ಸದಸ್ಯರನ್ನಾಗಿ ನೇಮಕ ಮಾಡಿ ಸರ್ಕಾರ ಕಳೆದ ಅಕ್ಟೋಬರ್ 16 ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವರೆಗೂ ಮಂಡಳಿಯ ಸದಸ್ಯರು ಕಾರ್ಯ ನಿರ್ವಹಿಸದಂತೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.
ಅರ್ಜಿಯಲ್ಲಿ ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ದಿನೇಶ್ ಸಿಂಗ್ವಿ ಅವರನ್ನು ಸರ್ಕಾರ ಮಂಡಳಿ ಸದಸ್ಯರನ್ನಾಗಿ ನೇಮಿಸಿದೆ. ಅವರು ಗಣಿ ಮಾಲೀಕರಾಗಿದ್ದು, ಬೇಲೆಕೇರಿ ಅಕ್ರಮ ಅದಿರು ಸಾಗಾಣೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಹಾಗಿದ್ದೂ ಅವರನ್ನು ಸದಸ್ಯರನ್ನಾಗಿ ಮುಂದುವರಿಸಲಾಗುತ್ತಿದೆ. ಅಲ್ಲದೆ, ಅಕ್ಟೋಬರ್ 16ರಂದು ಹೊಸದಾಗಿ 10 ಮಂದಿ ಸದಸ್ಯರನ್ನು ನೇಮಕ ಮಾಡಿದ್ದು, ಅವರಲ್ಲಿ ಬಿ. ಚೇತನ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿಜೆಪಿ ಕಾರ್‍ಯಕರ್ತನಾಗಿದ್ದರೆ, ಡಾ.ಎ.ಆರ್. ಸೋಮಶೇಖರ್ ವೈದ್ಯರಾಗಿದ್ದಾರೆ.
ಇನ್ನು ಶಾಸಕ ಎಸ್.ಆರ್. ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಕೂಡ ಸದಸ್ಯನಾಗಿದ್ದಾರೆ. ಅದೇ ರೀತಿ ಕಂದಾಯ ಸಚಿವ ಆರ್. ಅಶೋಕ ಸಂಬಂಧಿ ಜೆ.ಎಸ್. ನವೀನ್ ಹಾಗೂ ಇಬ್ಬರು ಪತ್ರಕರ್ತರು ಕೂಡ ಸದಸ್ಯರಾಗಿದ್ದಾರೆ. ಇವರುಗಳಿಗೆ ವನ್ಯಜೀವಿಗಳ ಬಗ್ಗೆ ಜ್ಞಾನವಿಲ್ಲದಿದ್ದರೂ ನೇಮಕ ಮಾಡಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.