ಬೆಂಗಳೂರು: ವಿಧಾನಸಭೆ ಕಾರ್ಯದರ್ಶಿಯಾಗಿದ್ದ ಎಸ್. ಮೂರ್ತಿ ಅವರನ್ನು ಮರುನೇಮಕ ಮಾಡಬೇಕು ಎಂದು ಏಕಸದಸ್ಯಪೀಠ ನೀಡಿದ್ದ ಆದೇಶ ಪಾಲನೆಯಾಗಿಲ್ಲ ಅಂತಾ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ವಿಧಾನಸಭಾ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಎಸ್. ಮೂರ್ತಿ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅರವಿಂದ್ ಕುಮಾರ್ ಮತ್ತು ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ.
ಇದಕ್ಕೂ ಮುನ್ನ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಎ. ಎಸ್. ಪೊನ್ನಣ್ಣ, ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ಎಸ್. ಮೂರ್ತಿ ಅವರನ್ನು ಅಮಾನತುಗೊಳಿಸಿ ವಿಧಾನಸಭೆ ವಿಶೇಷ ಮಂಡಳಿ ಹೊರಡಿಸಿರುವ ಆದೇಶ ನಿಯಮಾನುಸಾರವಾಗಿಲ್ಲ ಎಂದು ಹೇಳಿದ್ದ ಏಕ ಸದಸ್ಯ ಪೀಠ, ಶಿಸ್ತುಕ್ರಮ ವಿಚಾರಣಾ ಸಮಿತಿಯ ಫಲಿತಾಂಶದ ಆಧಾರದ ಮೇಲೆ ಅರ್ಜಿದಾರರನ್ನು ಮೂರು ವಾರಗಳಲ್ಲಿ ಮರು ನೇಮಕ ಮಾಡಬೇಕು ಎಂದು ಜುಲೈ 2 ರಂದು ಆದೇಶ ನೀಡಿತ್ತು.
ಆದರೆ, ಏಕಸದಸ್ಯಪೀಠ ಆದೇಶ ನೀಡಿ ಮೂರು ತಿಂಗಳಾಗುತ್ತ ಬಂದರೂ ಇನ್ನೂ ಮರುನೇಮಕ ಮಾಡಿಲ್ಲ. ಈ ಬಗ್ಗೆ ಅರ್ಜಿದಾರರು ನೀಡಿರುವ ಮನವಿಯನ್ನೂ ಪರಿಗಣಿಸಿಲ್ಲ. ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಗಿದೆ. ಹೀಗಾಗಿ ಪ್ರತಿವಾದಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕು ಎಂದು ಕೋರಿದರು.