ಬೆಂಗಳೂರು: ವಿಮಾ ಸಂಸ್ಥೆಗಳಲ್ಲಿ ಪಾಲಿಸಿದಾರರು ಕ್ಲೇಮ್ ಮಾಡದೇ ಉಳಿದಿರುವ ಹಣವನ್ನು ಹಿರಿಯ ನಾಗರಿಕ ಕಲ್ಯಾಣ ನಿಧಿಗೆ ವರ್ಗಾಯಿಸುವ ಬಗ್ಗೆ ಮೇಲ್ವಿಚಾರಣೆ ನಡೆಸುವಂತೆ ಹೈಕೋರ್ಟ್ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಐಆರ್‌ಡಿಆರ್) ಸೂಚಿಸಿದೆ.
ಆ್ಯಂಟಿ ಕರಪ್ಷನ್ ಕೌನ್ಸಿಲ್ ಆಫ್ ಇಂಡಿಯಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ಕ್ಲೇಮ್ ಮಾಡದಿರುವ ವಿಮೆ ಹಣವನ್ನು ವಿಮಾ ಸಂಸ್ಥೆಗಳು ಕಾಲಕಾಲಕ್ಕೆ ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ವರ್ಗಾವಣೆ ಮಾಡುತ್ತಿವೆ. ಆ ಹಣದ ವೇಲೆ ಐಆರ್‌ಡಿಆರ್ ನಿಗಾವಹಿಸುತ್ತಿದೆ.
ಆದರೂ ಸುತ್ತೋಲೆ ನಿಯಮಗಳನ್ನು ಕಟ್ಟುನಿಟ್ಟಾಗಿ ವಿಮಾ ಸಂಸ್ಥೆಗಳು ಪಾಲಿಸುವ ಬಗ್ಗೆ ನಿಗಾವಹಿಸಬೇಕು. ಕಾಲಕಾಲಕ್ಕೆ ವರದಿ ತರಿಸಿಕೊಂಡು ಮೇಲ್ವಿಚಾರಣೆ ಮಾಡಬೇಕು ಎಂದು ಐಆರ್‌ಡಿಆರ್‌ಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ಎಲ್‌ಐಸಿ ಸೇರಿ ದೇಶದ ವಿವಿಧ ವಿಮಾ ಸಂಸ್ಥೆಗಳು ಹೆಚ್ಚಿನ ಸಂಖ್ಯೆ ಜನರಿಂದ ವಿಮಾ ಪಾಲಿಸಿಯ ಪ್ರೀಮಿಯಂ ಸಂಗ್ರಹಿಸುತ್ತಿವೆ. ಮೆಚ್ಯೂರಿಟಿ ಅವಧಿ ಪೂರ್ಣಗೊಂಡರೂ ಮತ್ತು ಪಾಲಿಸಿದಾರ ಮೃತಪಟ್ಟ ಸಂದರ್ಭದಲ್ಲಿ ಕ್ಲೇಮ್ ಮಾಡದ ಸಾವಿರಾರು ಕೋಟಿ ರೂ. ಸಂಸ್ಥೆಗಳಲ್ಲೇ ಉಳಿದಿದೆ. ಅದನ್ನು ಸಮಾಜ ಕಲ್ಯಾಣ ಚುಟುವಟಿಕೆಗಳಿಗೆ, ಹಿರಿಯ ನಾಗರಿಕ ಕಲ್ಯಾಣ ನಿಧಿಗೆ ವರ್ಗಾಯಿಸುವಂತೆ ಕೋರಿದರು.
ಐಆರ್‌ಡಿಆರ್ ಪರ ವಕೀಲರು ವಾದಿಸಿ, ವಿಮಾ ಕಂಪನಿಗಳ ಮೇಲೆ ಐಆರ್‌ಡಿಆರ್ ನಿಯಂತ್ರಣ ಹೊಂದಿದೆ. ಕ್ಲೇಮ್ ಮಾಡದೇ ಉಳಿದ ಪಾಲಿಸಿ ಹಣವನ್ನು 10 ವರ್ಷಗಳ ನಂತರ ಹಿರಿಯ ನಾಗರಿಕ ಕಲ್ಯಾಣ ನಿಧಿಗೆ ವರ್ಗಾಯಿಸುವುದನ್ನು ಕಡ್ಡಾಯಗೊಳಿಸಿದೆ. ಎಲ್ಲ ವಿಮಾ ಕಂಪನಿಗಳು ಹಣ ವರ್ಗಾವಣೆ ಮಾಡುತ್ತಿದ್ದು, ಐಆರ್‌ಡಿಆರ್ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ವಿವರಿಸಿದರು.
ಓದಿ: ಕೊರೊನಾ ಲಸಿಕೆ ಹಾಕಿಸಿಕೊಳ್ಳದೇ ಇದ್ದರೆ ಅಂಗಡಿ ಬಂದ್ ಮಾಡಿ... ಅಧಿಕಾರಿಗಳಿಂದ ಕಾರ್ಯಾಚರಣೆ