ಬೆಂಗಳೂರು: ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದ ನೂರು ಮೀಟರ್ ವ್ಯಾಪ್ತಿಯ ನಿರ್ಬಂಧಿತ ಪ್ರದೇಶದಲ್ಲಿ ಕೈಗೆತ್ತಿಕೊಂಡಿರುವ ಕಟ್ಟಡ ನಿರ್ಮಾಣ ಕಾಮಗಾರಿಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಮುಂದಿನ ಆದೇಶದವರೆಗೆ ವಿಸ್ತರಿಸಿದೆ.
ದೇವಸ್ಥಾನದ ನಿರ್ಬಂಧಿತ ವ್ಯಾಪ್ತಿಯೊಳಗೆ ಕಟ್ಟಡ ನಿರ್ಮಿಸದಂತೆ ಕೋರಿ ಬೈಲಹೊಂಗಲ ನಿವಾಸಿ ಮಹೇಂದ್ರಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲೆ ವಿಜೇತಾ ಆರ್. ನಾಯಕ್ ವಾದ ಮಂಡಿಸಿ, ಕಳೆದ ಬಾರಿ ತಹಶೀಲ್ದಾರ್ ವರದಿ ಸಲ್ಲಿಸಿದ್ದಾರೆ. ದೇವಸ್ಥಾನದ 100 ಮೀಟರ್ ವಿಸ್ತೀರ್ಣ ಕೇಂದ್ರ ಸಂರಕ್ಷಿತ ಸ್ಮಾರಕದ ವ್ಯಾಪ್ತಿಗೆ ಬರುತ್ತದೆ. ಅದಾಗ್ಯೂ ನಿರ್ಮಾಣ ಕಾಮಗಾರಿ ಮುಂದುವರೆದಿದೆ ಎಂದು ವಿವರಿಸಿದರು.
ದೇವಸ್ಥಾನದ ಪರ ವಕೀಲರು ವಾದಿಸಿ, ಆಡಳಿತ ಬ್ಲಾಕ್ನ ಕಾಮಗಾರಿ ಒಂದು ವರ್ಷದ ಹಿಂದೆಯೇ ಸ್ಥಗಿತಗೊಳಿಸಲಾಗಿದೆ. ಭಕ್ತಾದಿಗಳಿಗೆ ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆಯಷ್ಟೇ. ಕಬ್ಬಿಣದ ಪಿಲ್ಲರ್‌ಗಳನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿತ್ತು. ಆದರೆ, 2020ರ ಅ. 12ರಂದು ನ್ಯಾಯಾಲಯ ತಡೆ ನೀಡಿದ ಬಳಿಕ ಕಾಮಗಾರಿ ನಿಲ್ಲಿಸಲಾಗಿದೆ ಎಂದರು. ವಾದ ಪ್ರತಿವಾದ ಆಲಿಸಿದ ಪೀಠ, ಅಕ್ರಮ ಕಟ್ಟಡ ಕಾಮಗಾರಿಗಳನ್ನು ತಡೆಯುವುದಲ್ಲ, ಅದನ್ನು ತೆರವುಗೊಳಿಸಬೇಕು. ಈ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಪರ ವಕೀಲರಿಗೆ ಪ್ರಶ್ನಿಸಿತು. ವಕೀಲರು ಉತ್ತರಿಸಿ, ತೆರವುಗೊಳಿಸಲು ಸಂಬಂಧಿಸಿದವರಿಗೆ ನೋಟಿಸ್ ನೀಡಲಾಗಿದೆ ಎಂದರು. ಈ ಹಿನ್ನೆಲೆ 2020ರ ಅ. 12ರಂದು ನೀಡಿದ್ದ ಮಧ್ಯಂತರ ತಡೆ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಿ ವಿಚಾರಣೆಯನ್ನು ಮುಂದೂಡಿತು.