ಬೆಂಗಳೂರು: ಹೈಕೋರ್ಟ್ ಪೀಠಗಳ ಕಲಾಪವನ್ನು ಸೋಮವಾರದಿಂದ ಅಧಿಕೃತವಾಗಿ ನೇರಪ್ರಸಾರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಕುರಿತ ನಿಯಮಗಳನ್ನು ರಾಜ್ಯಪತ್ರದ ಮೂಲಕ ಪ್ರಕಟಿಸಿದ ನಂತರ, ಇದೇ ಮೊದಲ ಬಾರಿಗೆ ಪ್ರಯೋಗಿಕವಾಗಿ ಹೈಕೋರ್ಟ್‌ನ ದಿನದ ಸಂಪೂರ್ಣ ಕಲಾಪವನ್ನು ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಲಾಯಿತು.
ಹೈಕೋರ್ಟ್‌ನ ಪ್ರಧಾನ ಪೀಠದ ಕೋರ್ಟ್ ಹಾಲ್ 1 ಮತ್ತು 3ರ ಕಲಾಪವನ್ನು ಪ್ರಾಯೋಗಿಕವಾಗಿ ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಲಾಯಿತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದ ಒಂದೂವರೆ ಗಂಟೆಯ ಕಲಾಪವನ್ನು ನೇರಪ್ರಸಾರ ಮಾಡಲಾಗಿದ್ದು, ಸಂಜೆ ವೇಳೆಗೆ ಸುಮಾರು 2,400 ಜನ ವೀಕ್ಷಣೆ ಮಾಡಿದ್ದರು.
ಇದನ್ನೂ ಓದಿ: ಅಜೀಂ ಪ್ರೇಮ್ ಜಿ ವಿರುದ್ಧ ದುರುದ್ದೇಶಪೂರಿತ ಅರ್ಜಿ : ಚೆನ್ನೈ ಮೂಲದ ವಕೀಲರಿಬ್ಬರಿಗೆ ಜೈಲು ಶಿಕ್ಷೆ
ಹಾಗೆಯೇ, ನ್ಯಾಯಮೂರ್ತಿ ಎಸ್. ಸುಜಾತ ಅವರ ನೇತೃತ್ವದ ವಿಭಾಗೀಯ ಪೀಠದ ಒಂದೂಕಾಲು ಗಂಟೆ ಸಮಯದ ಕಲಾಪವನ್ನು ನೇರ ಪ್ರಸಾರ ಮಾಡಲಾಗಿದ್ದು, 1,500 ಜನ ವೀಕ್ಷಣೆ ಮಾಡಿದ್ದಾರೆ. ಕೋರ್ಟ್ ಹಾಲ್ ಎರಡು ಮತ್ತು ನಾಲ್ಕರ ಕಲಾಪವನ್ನು ನೇರಪ್ರಸಾರ ಮಾಡಲು ಸಿದ್ಧತೆ ನಡೆಸಲಾಗಿತ್ತಾದರೂ ತಾಂತ್ರಿಕ ಕಾರಣಗಳಿಂದ ಪ್ರಸಾರವಾಗಲಿಲ್ಲ.
‘ಕರ್ನಾಟಕ ರೂಲ್ಸ್ ಅನ್ ಲೈವ್ ಸ್ಟ್ರೀಮಿಂಗ್ ಆ್ಯಂಡ್ ರೆಕಾರ್ಡಿಂಗ್ ಆಫ್ ಕೋರ್ಟ್ ಪ್ರೊಸೀಡಿಂಗ್ಸ್’ ನಿಯಮಗಳನ್ನು ಸರ್ಕಾರ 2021ರ ಡಿ.30ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು. ಅದರಂತೆ ಇಂದು ಅಧಿಕೃತವಾಗಿ ಮೊದಲ ಬಾರಿಗೆ ಹೈಕೋರ್ಟ್ ತನ್ನ ಕಲಾಪವನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿದೆ. ಇದಕ್ಕೂ ಮುನ್ನ ಕಳೆದ ವರ್ಷ ಪ್ರಾಯೋಗಿಕವಾಗಿ ಯೂಟ್ಯೂಬ್ ನಲ್ಲಿ ನೇರಪ್ರಸಾರ ಮಾಡಲಾಗಿತ್ತು.