ಬೆಂಗಳೂರು: ರಾಜ್ ಫಿಶ್ ಮೀಲ್ ಮತ್ತು ಆಯಿಲ್ ಕಂಪನಿಯು ಸತ್ತ ಮೀನುಗಳು ಮತ್ತು ತ್ಯಾಜ್ಯವನ್ನು ಉಡುಪಿಯ ಮಲ್ಪೆ ಬಳಿ ಜಲಮೂಲಗಳಿಗೆ ಹರಿಬಿಡುವ ಮೂಲಕ ಪರಿಸರ ಮಾಲಿನ್ಯ ಉಂಟು ಮಾಡುತ್ತಿದೆ. ಅದರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ ಉದ್ಯಮಿಗೆ ಹೈಕೋರ್ಟ್ ₹10 ಲಕ್ಷ ದಂಡ ವಿಧಿಸಿದೆ.
ಹಂಗಾಮಿ ಸಿಜೆ ಎಸ್.ಸಿ.ಶರ್ಮ ನೇತೃತ್ವದ ವಿಭಾಗೀಯ ಪೀಠ ಪಿಐಎಲ್ ಅರ್ಜಿ ಸಲ್ಲಿಸಿದ್ದ ಉದ್ಯಮಿ ಪ್ರಶಾಂತ್ ಅಮಿನ್ ಅವರಿಗೆ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಒಂದು ತಿಂಗಳಲ್ಲಿ ಕರ್ನಾಟಕ ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ಜಮೆ ಮಾಡಬೇಕು. ಹಣವನ್ನು ಕೋವಿಡ್‌ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಕೀಲರ ಗುಮಾಸ್ತರ ಅನುಕೂಲಕ್ಕೆ ಬಳಸಬೇಕು. ಒಂದು ತಿಂಗಳಲ್ಲಿ ಹಣ ಪಾವತಿಸದಿದ್ದರೆ ಉಡುಪಿ ಜಿಲ್ಲಾಧಿಕಾರಿ ದಂಡದ ಮೊತ್ತವನ್ನು ಅರ್ಜಿದಾರರಿಂದ ವಸೂಲಿ ಮಾಡಿ ವರದಿ ಸಲ್ಲಿಸಬೇಕು ಎಂದು ಆದೇಶಿಸಿದೆ.
ಅರ್ಜಿದಾರ ಪ್ರಶಾಂತ್ ಅಮಿನ್ ಅವರು ಮಲ್ಪೆಯ ರಾಜ್ ಫಿಶ್ ಮೀಲ್ ಮತ್ತು ಆಯಿಲ್ ಕಂಪನಿ ಜೊತೆ ವ್ಯಾಪಾರ-ವಹಿವಾಟು ನಡೆಸಿದ್ದಾರೆ. ಕಂಪನಿಗೆ ಅರ್ಜಿದಾರರು ಮೀನು ಪೂರೈಕೆ ಮಾಡುತ್ತಿದ್ದು ನಂತರ ಒಪ್ಪಂದ ಮುರಿದು ಬಿದ್ದಿದೆ. ತದನಂತರ ಕಂಪೆನಿ ವಿರುದ್ಧ ಆರೋಪ ಮಾಡಲಾಗಿದೆ.
ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಂಪನಿ ಬಗ್ಗೆ ಯಾವುದೇ ಆಪಾದನೆ ಮಾಡಿಲ್ಲ. ಕೇವಲ ವ್ಯಾಪಾರ ಮತ್ತು ವೈಯಕ್ತಿಕ ಹಿತಾಸಕ್ತಿಯಿಂದ ಸಲ್ಲಿಸಿರುವ ಅರ್ಜಿಯು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟು, ಅರ್ಜಿ ವಜಾಗೊಳಿಸಿ ₹10 ಲಕ್ಷ ದಂಡ ವಿಧಿಸಿದೆ.