ಬೆಂಗಳೂರು: ಏಕಕಾಲಕ್ಕೆ ಸರಕು ಮತ್ತು ಸೇವಾ ತೆರಿಗೆ, ಅಬಕಾರಿ ಸುಂಕ ಮತ್ತು ರಾಷ್ಟ್ರೀಯ ವಿಪತ್ತು ಸಂಕಷ್ಟ ಸುಂಕ ವಿಧಿಸುವುದನ್ನು ಪ್ರಶ್ನಿಸಿ ತಂಬಾಕು ಉತ್ಪನ್ನಗಳ ಉತ್ಪಾದಕರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಏಕಕಾಲದಲ್ಲಿ ಮೂರು ರೀತಿಯ ಸುಂಕ ಸಂಗ್ರಹಿಸುವ ಕೇಂದ್ರ ಸರ್ಕಾರದ ಕಾನೂನುನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ತಂಬಾಕು ಉತ್ಪನ್ನಗಳ ಮೇಲೆ ಏಕಕಾಲದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ), ಅಬಕಾರಿ ಸುಂಕ ಮತ್ತು ರಾಷ್ಟ್ರೀಯ ವಿಪತ್ತು ಸಂಕಷ್ಟ ಸುಂಕವನ್ನು ವಿಧಿಸುವ ಕೇಂದ್ರ ಸರ್ಕಾರದ ಕಾನೂನನ್ನು ಪ್ರಶ್ನಿಸಿ ವಿ.ಎಸ್.ಪ್ರಾಡಕ್ಟ್ಸ್ ಸೇರಿ ಹಲವು ತಂಬಾಕು ಉತ್ಪಾದಕರು ಮತ್ತು ತಂಬಾಕು ಉತ್ಪನ್ನಗಳ ಉತ್ಪಾದಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನ್ಯಾ.ಎಸ್.ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಏಕ ಸದಸ್ಯಪೀಠದಲ್ಲಿ ನಡೆಯಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕಲಂ 254ಎಗೆ ತಿದ್ದುಪಡಿ ಮಾಡಿ ಸರಕು ಮತ್ತು ಸೇವಾ ತೆರಿಗೆ ಆಡಳಿತ ಕಾನೂನುಗಳನ್ನು ಮಾಡುವ ಅಧಿಕಾರ ಹೊಂದಿದ್ದರೂ ಸಹ, 246 ಮತ್ತು 246 ಎ ವಿಧಿಯಡಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಅಬಕಾರಿ ಸುಂಕಗಳನ್ನು ವಿಧಿಸುವ ಅಧಿಕಾರ ಹೊಂದಿದೆ. ಹಾಗಾಗಿ ಕಾನೂನುಗಳು ಸಿಂಧುವಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಏಕಕಾಲದಲ್ಲಿ ಜಿಎಸ್ಟಿ,ಅಬಕಾರಿ, ರಾಷ್ಟ್ರೀಯ ವಿಪತ್ತು ಸಂಕಷ್ಟು ಸುಂಕ ಸಂಗ್ರಹಿಸುವ ಕೇಂದ್ರ ಸರ್ಕಾರದ ಕಾನೂನನ್ನು ಎತ್ತಿ ಹಿಡಿದು ತಂಬಾಕು ಉತ್ಪನ್ನಗಳ ತಯಾರಕರ ಅರ್ಜಿ ವಜಾಗೊಳಿಸಿತು.