ಬೆಂಗಳೂರು : ರಾಜ್ಯದಲ್ಲಿ ಖಾಲಿಯಿರುವ ಉಪ ಲೋಕಾಯುಕ್ತ ಹುದ್ದೆಯನ್ನು ಆದಷ್ಟು ಶೀಘ್ರ ಭರ್ತಿ ಮಾಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಖಾಲಿ ಇರುವ ಉಪ ಲೋಕಾಯುಕ್ತ ಹುದ್ದೆ ಭರ್ತಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಎಸ್. ಉಮಾಪತಿ ಎಂಬ ವಕೀಲರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸತೀಶ್ ಚಂದ್ರ ವರ್ಮಾ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಅರ್ಜಿ ವೇಳೆ ಸರ್ಕಾರದ ಪರ ವಕೀಲರು, ಖಾಲಿ ಇದ್ದ ಉಪ ಲೋಕಾಯುಕ್ತ ಹುದ್ದೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರನ್ನು ನೇಮಿಸಿ 2019ರ ನ.20ರಂದು ಆದೇಶಿಸಲಾಗಿದೆ. ಆದರೆ, 2020ರ ಡಿ.14ರಂದು ಉಪ ಲೋಕಾಯುಕ್ತ-2 ಆಗಿದ್ದ ನ್ಯಾಯಮೂರ್ತಿ ಎನ್. ಆನಂದ್ ನಿವೃತ್ತರಾಗಿದ್ದಾರೆ.
ಹೀಗಾಗಿ, ಹುದ್ದೆ ಖಾಲಿ ಇದೆ. ಅರ್ಹರನ್ನು ಸೂಚಿಸುವಂತೆ ಕೋರಿ ಈಗಾಗಲೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ವಿಧಾನಸಭೆ ಸ್ಪೀಕರ್ ಮತ್ತು ವಿಧಾನ ಪರಿಷತ್ ಸಭಾಪತಿ ಅವರಿಗೆ ಪತ್ರ ಬರೆಯಲಾಗಿದೆ. ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಾವಕಾಶ ನೀಡಬೇಕೆಂದು ಕೋರಿದರು.
ಓದಿ: ಸಿಎಂ ಕಾರ್ಯದರ್ಶಿ ಸಂತೋಷ್ಗೆ ಸಂಕಷ್ಟ: ಕಿಡ್ನಾಪ್ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್
ಸರ್ಕಾರದ ಪರ ವಕೀಲರ ಹೇಳಿಕೆ ದಾಖಲಿಸಿಕೊಂಡ ಪೀಠ, ಅರ್ಜಿದಾರರ ಮನವಿ ಪ್ರಾಮಾಣಿಕವಾಗಿದೆ. ಆದ್ದರಿಂದ ಉಪ ಲೋಕಾಯುಕ್ತ-2 ಹುದ್ದೆಯನ್ನು ಆದಷ್ಟು ಶೀಘ್ರವಾಗಿ ಭರ್ತಿ ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.