ಬೆಂಗಳೂರು: ಅಯ್ಯೋಧ್ಯಾ ನಗರದಲ್ಲಿ ಶ್ರೀ ರಾಮ ಮಂದಿರ ಶಿಲಾನ್ಯಾಸ ಮತ್ತು ಭೂಮಿ ಪೂಜೆ ಇರುವ ಕಾರಣ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಮುಂಜಾನೆಯಿಂದ ಹಿರಿಯಾಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿ ಕಟ್ಟೆಚ್ಚರ ವಹಿಸಿ ಅಹಿತಕರ ಘಟನೆಗಳು ನಡೆಯದ ರೀತಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಸದ್ಯ ಕೊರೊನಾ ಇರುವ ಕಾರಣ ದೇವಸ್ಥಾನದಲ್ಲಿ ಆಡಂಬರದ ಸಂಭ್ರಮ ಆಚರಿಸದಂತೆ ಪೊಲೀಸರು ಈಗಾಗಲೇ ಸೂಚನೆ ನೀಡ್ತಿದ್ದಾರೆ. ಇದೇ ಸಂದರ್ಭದಲ್ಲಿ ಸೂಕ್ಷ ಪ್ರದೇಶದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು, ಕಾನೂನು ನಿಯಮ ಉಲ್ಲಂಘನೆ ಮಾಡುವವರನ್ನು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಲು ಮುಂದಾಗಿದ್ದಾರೆ.
ಮತ್ತೊಂದೆಡೆ ಗೂಂಡಾ ಲಿಸ್ಟ್ನಲ್ಲಿರುವವರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದು, ಇಂದು ಒಂದು ವೇಳೆ ಅಹಿತಕರ ಘಟನೆ ನಡೆಸಿದರೆ ಅವರ ವಿರುದ್ದ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.
ಸದ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಮಡಿಕೇರಿ, ಮಂಗಳೂರು, ಬೆಂಗಳೂರು, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಕೋಲಾರ, ಕಲಬುರಗಿ ಪ್ರದೇಶದ ಐಜಿಪಿ ಎಸ್ಪಿಗಳು ಅತಿ ಹೆಚ್ಚು ನಿಗಾ ಇಡುವಂತೆ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೇಲೆ ನಿಗಾ:
ರಾಮಜನ್ಮಭೂಮಿ ಕುರಿತು ಈಗಾಗಲೇ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಇದರಂತೆ ಆದೇಶ ಪಾಲನೆ ಮಾಡುವುದು ಅನಿವಾರ್ಯ. ಆದರೆ, ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಶಿಲಾನ್ಯಾಸ ಅಥವಾ ಭೂಮಿಪೂಜೆ ಅಥವಾ ಪ್ರಧಾನಿ ಮೊದಿ ಬಗ್ಗೆ ಅವಹೇಳನ ಕಾರಿ, ಪ್ರಚೋದನಕಾರಿ ಮೆಸೇಜ್ ಪಾಸ್ ಮಾಡುವ ಸಾಧ್ಯತೆ ಇರುತ್ತದೆ.
ಹೀಗಾಗಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲಾಗಿದ್ದು, ಅಂತಹ ಮೆಸೇಜ್ ಪಾಸ್ ಮಾಡುವವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.