ಬೆಂಗಳೂರು: ಕಂಟ್ರಿಮೇಡ್ ಗ್ರೆನೇಡ್ ಪತ್ತೆಯಾಗಿದ್ದ ಪ್ರಕರಣ ಸಂಬಂಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ರೈಲ್ವೆ ಎಸ್ಪಿ ಕಚೇರಿಯಲ್ಲಿ ತುರ್ತು ಮೀಟಿಂಗ್ ನಡೆಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲು ಸೂಚಿಸಿದ್ದಾರೆ. ರೈಲ್ವೆ ಎಡಿಜಿಪಿ ಅಲೋಕ್ ಮೋಹನ್, ಎಸ್ಪಿ ಡಾ. ಭೀಮಾಶಂಕರ್ ಗುಳೇದ್ ಮತ್ತು ಪಶ್ಚಿಮ ವಿಭಾಗ ಡಿಸಿಪಿ ರವಿ ಡಿ.ಚನ್ನಣ್ಣನವರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ತುರ್ತು ಮೀಟಿಂಗ್ ನಡೆಸಿ ಒಟ್ಟು 150 ಪೊಲೀಸರ 10 ವಿಶೇಷ ತಂಡಗಳನ್ನ ರಚನೆ ಮಾಡಲಾಗಿದೆ.
ಪಶ್ಚಿಮ ವಿಭಾಗ ಡಿಸಿಪಿ ರವಿ ಡಿ.ಚನ್ನಣ್ಣನವರ್ ನೇತೃತ್ವದಲ್ಲಿ ಐದು ತಂಡಗಳನ್ನು ರಚನೆ ಮಾಡಲಾಗಿದ್ದು, ಇತ್ತ ರೈಲ್ವೆ ಎಸ್ಪಿ ಭೀಮಾ ಶಂಕರ್ ಗುಳೇದ್ ನೇತೃತ್ವದಲ್ಲಿ ಐದು ರೈಲ್ವೆ ಪೊಲೀಸರ ತಂಡ ತನಿಖೆ ಮುಂದುವಸಿದೆ.
ಪ್ರಾಥಮಿಕ ಹಂತದ ತನಿಖೆಯಲ್ಲಿ ಕಂಟ್ರಿ ಮೇಡ್ ಗ್ರೆನೇಡ್ ಎಂಬುದು ತಿಳಿದು ಬಂದಿದ್ದು, ಎಫ್ಎಸ್ಎಲ್ಗೆ ರವಾನೆ ಮಾಡಲಾಗಿದೆ. ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಪಶ್ಚಿಮ ಬಂಗಾಳದಿಂದ ಸ್ಪೋಟಕ ವಸ್ತು ತಂದಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಗಣಿಗಾರಿಕೆ ಅಥವಾ ಕಾಡಿನಲ್ಲಿ ಪ್ರಾಣಿಗಳ ಬೇಟೆಗೆ ಈ ಸ್ಪೋಟಕಗಳನ್ನ ಉಪಯೋಗಿಸುತ್ತಾರೆ. ಸದ್ಯಕ್ಕೆ ಯಾವುದೇ ಅಪಾಯವಿಲ್ಲಾ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.