ಬೆಂಗಳೂರು : ಗ್ರಾಮಾಂತರ ಜಿಲ್ಲೆಯ ಚಿಕ್ಕಬಳ್ಳಾಪುರ ಜೈಲಿನಲ್ಲಿ ಕೈದಿ ಎಸ್ಕೇಪ್ ಆಗಿದ್ದ ಬೆನ್ನಲ್ಲೇ ಕಾರಾಗೃಹ ಇಲಾಖೆ ಎಚ್ಚೆತ್ತು ಕೊಂಡಿದೆ. ರಾಜ್ಯದ ಎಲ್ಲಾ ಜೈಲುಗಳಿಗೂ ಸಂದೇಶ ರವಾನೆಯಾಗಿದ್ದು, ಪ್ರೊಬೆಷನರಿ ಪೊಲೀಸರಿಗೆ ಕೆಲಸದ ಜವಾಬ್ದಾರಿ ಕೊಡದಂತೆ ಸೂಚನೆ ನೀಡಲಾಗಿದೆ.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಹೈ ಅಲರ್ಟ್: ಭದ್ರತೆ ಹೆಚ್ಚಿಸಲು ಕಾರಾಗೃಹ ಇಲಾಖೆ ಸೂಚಿಸಿರುವ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕಾಂಪೌಂಡ್ ಸುತ್ತ ಭದ್ರತೆ ಹೆಚ್ಚಿಸಲು ಸೂಪರ್ಡೆಂಟ್ ಆದೇಶಿಸಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.
ಸಿಸಿಟಿವಿ ಅಳವಡಿಕೆ ಹೆಚ್ಚಿಸಿ ನಿಗಾವಹಿಸಲು ನುರಿತ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಮುಂದಾಗಿದ್ದು, ಪ್ರತಿ ಬಂಧಿಖಾನೆಯ ಬ್ಯಾರಕ್ ಬಳಿ ನಾಲ್ಬರು ಸಿಬ್ಬಂದಿ ನಿಯೋಜಿಸಲಾಗುತ್ತಿದೆ.
ಕೆಲಸಕ್ಕೆ ಹೋಗುವ ಕೈದಿಗಳ ಜೊತೆಯಲ್ಲಿ ಭದ್ರತಾ ಸಿಬ್ಬಂದಿ ಇರಲೇಬೇಕು ಎಂದು ತಾಕೀತು ಕೂಡ ಮೇಲಧಿಕಾರಿಗಳು ಮಾಡಿದ್ದಾರೆ ಎನ್ನಲಾಗಿದೆ.
ನಿರ್ಲಕ್ಷ್ಯ ಕಂಡು ಬಂದರೆ ತಕ್ಷಣ ಅಮಾನತು ಮಾಡುವುದಾಗಿ ಇಲಾಖೆ ಕೂಡ ಖಡಕ್ ಸೂಚನೆ ನೀಡಿದೆ. ಹೀಗಾಗಿ, ಸೆಂಟ್ರಲ್ ಜೈಲಿನಲ್ಲೀ ಹೊರಗಡೆ ಮತ್ತು ಒಳಗಡೆ ನಾಲ್ಕು ಹಂತದಲ್ಲಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.