ಬೆಂಗಳೂರು : ಕರ್ನಾಟಕದಲ್ಲಿ ಜುಲೈ 10 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಬಹುನಿರೀಕ್ಷಿತ ಮುಂಗಾರು ಮಳೆ ರಾಜ್ಯಕ್ಕೆ ಕೊಂಚ ತಡವಾಗಿ ಆಗಮಿಸಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ತುಂತುರು ಮಳೆಯಾಯಿತು. ನಗರದ ಕೆಲವು ಭಾಗಗಳು ಜಲಾವೃತಗೊಂಡು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯಿತು. ಪ್ರಯಾಣಿಕರು ಕೆಲ ಕಾಲ ತೊಂದರೆ ಅನುಭವಿಸಿದರು.
ಭಾರಿ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಜೊತೆಗೆ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಭಾರಿ ಗಾಳಿ ಜೊತೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಎಲ್ಲೆಲ್ಲಿ ಭಾರಿ ಮಳೆ?: ಮುಂದಿನ 4 ದಿನಗಳವರೆಗೆ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ರಾಯಚೂರು, ಚಿಕ್ಕಮಗಳೂರು, ದಾವಣಗೆರೆ, ಕೊಡಗು, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಮೈಸೂರು, ರಾಮನಗರ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗು ಕೋಲಾರದಲ್ಲೂ ಸಹ ಮಳೆಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ : ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟಕ್ಕೆ ನೆಲಕಚ್ಚಿದ ಮರಗಳು: ಇನ್ನೂ ಮೂರು ದಿನ ಜಿಲ್ಲಾದ್ಯಂತ ಭಾರಿ ಮಳೆ..
ರಾಜ್ಯದಲ್ಲಿ ಮಳೆ ಕೊರತೆಯಿಂದ ಬತ್ತಿ ಹೋಗಿದ್ದ ಅಣೆಕಟ್ಟುಗಳು, ಜಲಾಶಯಗಳು ನಿಧಾನಕ್ಕೆ ಭರ್ತಿಯಾಗತೊಡಗಿವೆ. ಕೆಆರ್ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 10.17 ಟಿಎಂಸಿ ತಲುಪಿದೆ. ಕಳೆದ ವರ್ಷ ಈ ವೇಳೆಗೆ 34.06 ಟಿಎಂಸಿ ನೀರು ಇತ್ತು. ಆಲಮಟ್ಟಿ ಅಣೆಕಟ್ಟೆಯಲ್ಲಿ ಕಳೆದ ವರ್ಷ ಈ ಸಮಯಕ್ಕೆ 50.04 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದರೆ, ಈ ಬಾರಿ 19.24 ಟಿಎಂಸಿ ನೀರಿದೆ.
ಇದನ್ನೂ ಓದಿ : Monsoon Rain: ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ.. ಖಾಸಗಿ ಶಿಕ್ಷಣ ಸಂಸ್ಥೆಯ ಮೇಲ್ಛಾವಣಿ ಕುಸಿತ, ರಜೆ ಹಿನ್ನೆಲೆ ತಪ್ಪಿತು ದುರಂತ
ಜಲಾಶಯಗಳಲ್ಲಿ ಒಳಹರಿವಿನ ಪ್ರಮಾಣ: ಲಿಂಗನಮಕ್ಕಿ ಅಣೆಕಟ್ಟೆಗೆ 9,237 ಕ್ಯೂಸೆಕ್ ನೀರು, ಕಬಿನಿ ಜಲಾಶಯಕ್ಕೆ 3,431 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನಿರಂತರ ಮಳೆಯಾಗುತ್ತಿದೆ. ಭದ್ರಾ ಅಣೆಕಟ್ಟೆಗೆ 2,397 ಕ್ಯೂಸೆಕ್, ಹಾರಂಗಿ ಅಣೆಕಟ್ಟೆಗೆ 1,518 ಕ್ಯೂಸೆಕ್ ಮತ್ತು ಸೂಪಾ ಅಣೆಕಟ್ಟೆಗೆ 1,736 ಕ್ಯೂಸೆಕ್ ನೀರು ಒಳಹರಿವು ಇದೆ. ವಾರಾಹಿ ಅಣೆಕಟ್ಟು, ಮಲಪ್ರಭಾ ಅಣೆಕಟ್ಟುಗಳಿಗೆ ಇನ್ನೂ ನೀರಿನ ಒಳಹರಿವು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುಂಗಾ ಅಣೆಕಟ್ಟು ಭರ್ತಿ: ಶಿವಮೊಗ್ಗದ ಗಾಜನೂರು ಗ್ರಾಮದಲ್ಲಿನ ತುಂಗಾ ಅಣೆಕಟ್ಟು ಭರ್ತಿಯಾಗಿ ನದಿಗೆ 7,545 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. 2 ಕ್ರಸ್ಟ್ ಗೇಟ್ಗಳ ಮೂಲಕ 2 ಸಾವಿರ ಕ್ಯೂಸೆಕ್ ನೀರು ಹಾಗೂ ಅದೇ ರೀತಿ ವಿದ್ಯುತ್ ಉತ್ಪಾದನೆಗೂ ಸಹ ನೀರು ಬಿಡಲಾಗುತ್ತಿದೆ.
ಇದನ್ನೂ ಓದಿ : ರಾಜ್ಯದ ಅತಿ ಚಿಕ್ಕ ತುಂಗಾ ಅಣೆಕಟ್ಟು ಭರ್ತಿ: 7,500 ಕ್ಯೂಸೆಕ್ ನೀರು ನದಿಗೆ ಬಿಡುಗಡೆ