ಬೆಂಗಳೂರು : ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಇನ್ನೂ ಐದು ದಿನಗಳವರೆಗೆ ಭಾರೀ ಮಳೆ ಬೀಳಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿಯೂ ಸಹ ಅತಿ ಹೆಚ್ಚು ಮಳೆ ಬರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ರಾಜ್ಯ ಸರಕಾರಕ್ಕೆ ವರದಿ ನೀಡಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು, ಹಾಸನ ಚಿಕ್ಕಮಗಳೂರು ಭಾರಿ ಮಳೆಯಾಗಲಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ರಾಜ್ಯ ಸರಕಾರಕ್ಕೆ ಮಾಹಿತಿ ನೀಡಿದೆ.
ಉತ್ತರ ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಸಹ ಭಾರೀ ಪ್ರಮಾಣದ ಮಳೆಯಾಗಲಿದೆ. ಶಿವಮೊಗ್ಗ ಸಮೀಪದ ಚೋರಡಿಯಲ್ಲಿ 67.60 ಮಿ.ಮೀ ಮಳೆಯಾಗಿದೆ. ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ನಲ್ಲಿ 224 ಮಿ.ಮೀ ಮಳೆ ಬಿದ್ದಿದೆ. ಹೊಸನಗರ ತಾಲೂಕಿನ ಕರಿಮನೆಯಲ್ಲಿ 141.50 ಮಿ.ಮೀ ಮಳೆ ಸುರಿದಿದೆ. ಸಾಗರ ತಾಲೂಕಿನಲ್ಲಿ 232.60ಮಿ.ಮೀ ನಷ್ಟು ಮಳೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.